ನವದೆಹಲಿ, ಜ 05 (DaijiworldNews/PY): ಹೆಲಿಕಾಫ್ಟರ್ ಅಪಘಾತದಲ್ಲಿ ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಸೇರಿದಂತೆ 11 ಇತರ ಸಶಸ್ತ್ರ ಪಡೆಗಳ ಸಿಬ್ಬಂದಿಯ ಜೀವವನ್ನು ಬಲಿತೆಗೆದುಕೊಂಡ ವರದಿಯ ತನಿಖೆಯ ಕುರಿತು ಅಧಿಕಾರಿಗಳು ವಾಯುಪಡೆ ಅಧಿಕಾರಿಗಳು ಬುಧವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮಾಹಿತಿ ನೀಡಲಿದ್ದಾರೆ.
ಅಪಘಾತದ ತನಿಖೆಗಾಗಿ ರಚಿಸಲಾದ ತ್ರಿ-ಸೇವಾ ತನಿಖಾ ತಂಡ ಡಿಸೆಂಬರ್ 31ರೊಳಗೆ ತಮ್ಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗಿತ್ತು. ತನಿಖಾ ತಂಡವು ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್ ಅವರ ನೇತೃತ್ವದಲ್ಲಿ ಸೇನೆ ಹಾಗೂ ನೌಕಾಪಡೆಯ ಇಬ್ಬರು ಬ್ರಿಗೇಡಿಯರ್ ಶ್ರೇಣಿಯ ಅಧಿಕಾರಿಗಳನ್ನು ಒಳಗೊಂಡಿದೆ. ಅಧಿಕಾರಿಗಳು ವಿವರವಾದ ವರದಿಯನ್ನು ಸಿದ್ದಪಡಿಸಲಿದ್ದಾರೆ ಹಾಗೂ ಬ್ಲ್ಯಾಕ್ ಬಾಕ್ಸ್ನಿಂದ ಪಡೆದ ದತ್ತಾಂಶಗಳ ಸಂಪೂರ್ಣವಾದ ವಿಶ್ಲೇಷಣೆಯನ್ನು ಮಾಡಿದ್ದಾರೆ ಎಂದು ಸರ್ಕಾರದ ಮೂಲಗಳು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದೆ.
ಪ್ರಕರಣದ ಪ್ರಾಥಮಿಕ ತನಿಖೆಯು, ಅಪಘಾತವು ಹಠಾತ್ ಎಂದು ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ತಮಿಳುನಾಡಿನ ನೀಲಗಿರಿ ಜಿಲ್ಲೆಯ ಮೇಲೆ ಐಎಎಫ್ನ ಎಂಐ-17ವಿ5 ಹೆಲಿಕಾಫ್ಟರ್ ಹಾರಾಟದ ವಿಡಿಯೋ ಸಹ ಹೊರಬಿದ್ದಿದ್ದು, ಹೆಲಿಕಾಪ್ಟರ್ ಪತನಗೊಳ್ಳುವ ಮುನ್ನ ಹೆಲಿಕಾಪ್ಟರ್ನ ಅಂತಿಮ ಕ್ಷಮಗಳನ್ನು ತೋರಿಸುತ್ತದೆ. ಸ್ಥಳೀಯರು ಚಿತ್ರೀಕರಿಸಿದ ವಿಡಿಯೋ, ಹಾರುವ ಹೆಲಿಕಾಪ್ಟರ್ ಕೆಲವೇ ಸೆಕೆಂಡುಗಳಲ್ಲಿ ಮಂಜಿನೊಳಗೆ ಕಣ್ಮರೆಯಾಗಿತ್ತು.
ಸೂಲೂರು ವಾಯುನೆಲೆಯಿಂದ ಬೆಳಗ್ಗೆ 11.48ಕ್ಕೆ ಟೇಕಾಫ್ ಆದ ಹೆಲಿಕಾಪ್ಟರ್ ಮಧ್ಯಾಹ್ನ 12.08ರ ಸುಮಾರಿಗೆ ನಿಯಂತ್ರಣ ಕೊಠಡಿಯ ಸಂಪರ್ಕ ಕಳೆದುಕೊಂಡಿತು. ಜನರಲ್ ರಾವತ್ ಅವರು ವೆಲ್ಲಿಂಗ್ಟನ್ನಲ್ಲಿರುವ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜಿಗೆ ಸ್ಟಾಫ್ ಕೋರ್ಸ್ನ ಅಧ್ಯಾಪಕರು ಮತ್ತು ವಿದ್ಯಾರ್ಥಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಲು ಹೋಗುತ್ತಿದ್ದ ಸಂದರ್ಭ ಅವರಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿತ್ತು. ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಸೇರಿದಂತೆ 11 ಇತರ ಸಶಸ್ತ್ರ ಪಡೆಗಳ ಸಿಬ್ಬಂದಿಗಳು ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದರು.