ಮಹಾರಾಷ್ಟ್ರ, ಜ 05 (DaijiworldNews/PY): ಮಹಾರಾಷ್ಟ್ರದ ನಾಗ್ಪುರದಲ್ಲಿ ವೈದ್ಯ ಸಲಿಂಗಕಾಮಿ ಜೋಡಿಯೊಂದು ನಿಶ್ಚಿತಾರ್ಥ ಮಾಡಿಕೊಂಡಿದ್ದು, ವಿವಾಹವಾಗಿ ಜೊತೆಯಾಗಿರಲು ತೀರ್ಮಾನಿಸಿದ್ದಾರೆ.
ಕಳೆದ ವಾರ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ವೈದ್ಯ ಸಲಿಂಗಜೋಡಿ ಜೊತೆಯಾಗಿ ಒಟ್ಟಿಗೆ ವಾಸಿಸಲು ನಿರ್ಧರಿಸಿದ್ದಾರೆ.
ಇಬ್ಬರು ಮಹಿಳೆಯರಲ್ಲಿ ಒಬ್ಬರಾದ ಮರೋಮಿತಾ ಮುಖರ್ಜಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಈಗಾಗಲೇ ನಾವು ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ. ಶೀಘ್ರದಲ್ಲೇ ನಾವು ಗೋವಾದಲ್ಲಿ ವಿವಾಹವಾಗಲು ಯೋಜಿಸಿದ್ದೇವೆ" ಎಂದಿದ್ದಾರೆ.
"2013ರಿಂದ ಈ ವಿಚಾರದ ಬಗ್ಗೆ ನನ್ನ ತಂದೆಗೆ ತಿಳಿದಿತ್ತು. ಈ ಕುರಿತು ಇತ್ತೀಚೆಗೆ ನಾವು ತಾಯಿಯ ಬಳಿ ಹೇಳಿದಾಗ ಅವರು ಆಘಾತಕ್ಕೊಳಗಾದರು. ಬಳಿಕ ಅವರು ನಾನು ಸಂತೋಷವಾಗಿರಬೇಕು ಎಂದು ಬಯಸಿ ಒಪ್ಪಿಕೊಂಡರು" ಎಂದು ಹೇಳಿದ್ದಾರೆ.
"ಇದಕ್ಕೆ ನನ್ನ ಕುಟುಂಬದಿಂದ ಯಾವುದೇ ವಿರೋಧವಿಲ್ಲ. ಈ ಬಗ್ಗೆ ನಾನು ನನ್ನ ಪೋಷಕರಿಗೆ ಹೇಳಿದಾಗ ಅವರು ಸಂತೋಷಪಟ್ಟರು" ಎಂದು ಸುರಭಿ ಮಿತ್ರಾ ತಿಳಿಸಿದ್ಧಾರೆ.