ವಿಶಾಖಪಟ್ಟಣಂ, ಜ 04 (DaijiworldNews/PY): ಸಮುದ್ರದಲ್ಲಿ ಮೀನುಗಾರಿಕೆ ನಡೆಸಲು ರಿಂಗ್ ನೆಟ್ಗಳ ಬಳಕೆ ವಿರೋಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮೀನುಗಾರರ ಎರಡು ಗುಂಪುಗಳ ಮಧ್ಯೆ ವಾಗ್ವಾದ ನಡೆದು, ಸಮುದ್ರದ ನಡುವೆ ಬೋಟ್ಗೆ ಬೆಂಕಿ ಹಚ್ಚಿರುವ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ವಿಶಾಖಪಟ್ಟಣಂನ ಚಿನ್ನಜಾಲರಿಪೇಟ, ಪೆದ್ದಜಾಲರಿಪೇಟಗಳ ಮೀನುಗಾರರು ಮೀನುಗಾರಿಕೆಗಾಗೆಂದು ಸಮುದ್ರಕ್ಕೆ ಇಳಿದಿದ್ದರು. ಈ ವೇಳೆ ಮೀನುಗಾರರ ಗುಂಪೊಂಡು ನಿರ್ಬಂಧಿತ ಪ್ರದೇಶಗಳಲ್ಲಿಯೂ ರಿಂಗ್ ನೆಟ್ ಅನ್ನು ಬಳಕೆ ಮಾಡಿ ಮೀನುಗಾರಿಕೆಗೆ ಮುಂದಾಗಿತ್ತು. ಸಾಂಪ್ರದಾಯಿಕ ಶೈಲಿಯ ಬಲೆಗಳನ್ನು ಬಳಕೆ ಮಾಡುವ ಇನ್ನೊಂದು ಗುಂಪು ಇದನ್ನು ಆಕ್ಷೇಪಿಸಿದ್ದು, ಈ ಸಂದರ್ಭ ವಾಗ್ವಾದ ನಡೆದಿದೆ. ಈ ವೇಳೆ ಮೀನುಗಾರರ ಒಂದು ಗುಂಪು ಮತ್ತೊಂದು ಗುಂಪಿನ ಬೋಟ್ಗೆ ಬೆಂಕಿ ಹಚ್ಚಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ಹದ್ದುಮೀರದಂತೆ ನಿಯಂತ್ರಿಸಿದ್ದಾರೆ.
ಸಾಂಪ್ರದಾಯಿಕ ಶೈಲಿಯ ನೆಟ್ಗಳನ್ನು ಬಳಕೆ ಮಾಡುವ ಹಾಗೂ ರಿಂಗ್ ನೆಟ್ಗಳನ್ನು ಬಳಕೆ ಮಾಡುವ ಮೀನುಗಾರರ ನಡುಗೆ ಆಗಾಗ ಈ ರೀತಿಯಾದ ವಾಗ್ವಾದಗಳು ನಡೆಯುತ್ತಿರುತ್ತವೆ. ರಿಂಗ್ ಬಳಕೆ ಮಾಡಿದರೆ ಸಣ್ಣ ಜಲಚರಗಳು ಬಲೆಗೆ ಸಿಲುಕಲಿದ್ದು, ಈ ಕಾರಣದಿಂದ ಜಲಚರಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಸಾಂಪ್ರದಾಯಿಕ ಶೈಲಿಯ ಬಲೆಗಳನ್ನು ಬಳಕೆ ಮಾಡುವವ ಆರೋಪ.