ಬರೇಲಿ, ಜ 04 (DaijiworldNews/MS): ಚುನಾವಣಾ ಪ್ರಚಾರದ ಹಿನ್ನಲೆಯಲ್ಲಿ ಉತ್ತರ ಪ್ರದೇಶದ ಬರೇಲಿಯಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ‘ಮಹಿಳಾ ಮ್ಯಾರಥಾನ್’ನಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಲಡ್ಕಿ ಹೂಂ, ಲಡ್ ಸಕ್ತಿ ಹೂಂ' (ನಾನು ಹುಡುಗಿ ಹಾಗೂ ನಾನು ಹೋರಾಡ ಬಲ್ಲೆ) ಹೆಸರಿನಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಚುನಾವಣಾ ಅಭಿಯಾನದ ಭಾಗವಾಗಿ ಮಹಿಳೆಯರ ಓಟದ ಸ್ಪರ್ಧೆಯನ್ನು ಡಿ.04ರ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ಮ್ಯಾರಥಾನ್ ನ ವಿಡಿಯೋದಲ್ಲಿ ಓಟ ಆರಂಭವಾದಾಗ ಕೆಲವು ಯುವತಿಯರು ಎಡವಿ ನೆಲಕ್ಕೆ ಬೀಳುತ್ತಿರುವುದನ್ನು ಕಾಣಬಹುದಾಗಿದೆ. ಅವರ ಹಿಂದೆ ಓಡುತ್ತಿದ್ದವರು ತಕ್ಷಣವೇ ನಿಲ್ಲುವ ಭರದಲ್ಲಿ ಮುಗ್ಗರಿಸಿದ್ದು ಇದರಿಂದ ಮತ್ತಷ್ಟು ಓಟಗಾರರು ನೆಲಕ್ಕೆ ಉರುಳಿದ್ದಾರೆ. ಹೀಗಾಗಿ ಕಾಲ್ತುಳಿತದಂತಹ ಸನ್ನಿವೇಶ ಸೃಷ್ಟಿಯಾಯಿತು.
ಈ ಘಟನೆಯಲ್ಲಿ ಕೆಲವು ಓಟಗಾರರು ಗಾಯಗೊಂಡಿದ್ದು ಸುಮಾರು ಮೂವರಕ್ಕೂ ಹೆಚ್ಚು ಸ್ಪರ್ಧಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳದಲ್ಲಿದ್ದು, ತನಿಖೆ ಕೈಗೊಂಡಿದ್ದಾರೆ. ಈ ಬಗ್ಗೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕಿ ಮತ್ತು ಬರೇಲಿಯ ಮಾಜಿ ಮೇಯರ್ ಸುಪ್ರಿಯಾ ಏರೊನ್, 'ಆತಂಕ ಪಡುವ ಅಗತ್ಯವಿಲ್ಲ. ವೈಷ್ಣೋ ದೇವಿಯಲ್ಲೇ ಕಾಲ್ತುಳಿತ ಉಂಟಾಗಿದೆ, ಇವರು ಹುಡುಗಿಯರು...ಇದು ಮನುಷ್ಯನ ಸಹಜ ಗುಣ. ಆದರೆ ನಾನು ಕ್ಷಮೆ ಕೋರುತ್ತೇನೆ. ಚುನಾವಣೆಗೆ ಮುನ್ನ ಕಾಂಗ್ರೆಸ್ ಪರ ಹೆಚ್ಚುತ್ತಿರುವ ಓಲವಿನ ಹಿನ್ನಲೆಯಲ್ಲಿ ಇದು ಕಾಂಗ್ರೆಸ್ ವಿರುದ್ಧದ ಪಿತೂರಿಯೂ ಆಗಿರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.
ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚಳದ ನಡುವೆಯೂ ಮ್ಯಾರಥಾನ್ನಲ್ಲಿ ಭಾಗಿಯಾಗಿದ್ದವರು ಅಂತರ ಕಾಯ್ದುಕೊಂಡಿರಲಿಲ್ಲ ಹಾಗೂ ಹಲವು ಸ್ಪರ್ಧಿಗಳು ಮಾಸ್ಕ್ ಧರಿಸದಿರುವುದನ್ನು ವಿಡಿಯೊದಲ್ಲಿ ಗುರುತಿಸಬಹುದಾಗಿದೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪುನರುಜ್ಜೀವನಕ್ಕಾಗಿ ಶ್ರಮಿಸುತ್ತಿರುವ ರಾಜ್ಯ ಪಕ್ಷದ ಉಸ್ತುವಾರಿಯೂ ಆಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಶೇಕಡಾ 40 ರಷ್ಟು ಟಿಕೆಟ್ ನೀಡುವುದು ಸೇರಿದಂತೆ ಮಹಿಳೆಯರಿಗೆ ಹಲವಾರು ಭರವಸೆಗಳನ್ನು ಘೋಷಿಸಿದ್ದಾರೆ.