ಬೆಂಗಳೂರು, ಜ 04 (DaijiworldaNews/HR): ರಾಮನಗರದಲ್ಲಿ ನಡೆದ ಘಟನೆಯನ್ನಾಧರಿಸಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆಗಳು ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಅವರು, "ಸರ್ಕಾರಿ ಕಾರ್ಯಕ್ರಮದಲ್ಲಿ ಸಚಿವರು ಭಾಷಣದಲ್ಲಿ ಬಳಸುತ್ತಿರುವ ಭಾಷೆ, ಶೈಲಿ ಸರಿಯಿಲ್ಲ, ಸಾಕು ಎಂದು ಸ್ವತಃ ಮುಖ್ಯಮಂತ್ರಿಗಳೇ ಸೂಚಿಸುತ್ತಿದ್ದರೂ ಅವರು ಆ ರೀತಿ ಮಾತನಾಡಿದ್ದು ಎಷ್ಟು ಸರಿ? ಉನ್ನತ ಶಿಕ್ಷಣ ಸಚಿವರಾಗಿ ಅವರು ತಮ್ಮ ಮಾತು, ವರ್ತನೆಯಿಂದ ರಾಜ್ಯದ ಎಲ್ಲ ಯುವ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ" ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಮುಖ್ಯಮಂತ್ರಿಗಳ ಮುಂದೆ ಗಂಡಸ್ತನದ ಚರ್ಚೆಗೆ ಬರಬೇಕು ಅಂತಿದ್ದರೆ ಬರಲಿ. ಡಿ.ಕೆ. ಸುರೇಶ್ ಗೆ ಪಲಾಯನ ಮಾಡುವ ಅನಿವಾರ್ಯತೆ ಇಲ್ಲ. ಮತ್ತೊಮ್ಮೆ ಮಂತ್ರಿಯ ನಡವಳಿಕೆ ಪ್ರಚಾರ ಮಾಡಲು ಮುಂದಾಗಿರುವ ಬಿಜೆಪಿಯ ಎಲ್ಲ ನಾಯಕರು, ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.
ನಿನ್ನೆಯ ಘಟನೆ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ವ್ಯಾಖ್ಯಾನ, ಹೇಳಿಕೆ, ಪ್ರತಿ ಹೇಳಿಕೆ ಕೇಳಿದ್ದೇನೆ. ಒಬ್ಬ ಮಂತ್ರಿ ಅನವಶ್ಯಕವಾಗಿ ಸಭೆ ಹೊರತಾಗಿ ನಾವು ಬಿಜೆಪಿಯವರು, ನಾವು ಮಾಡುವುದೇ ಹೀಗೆ, ಗಂಡಸಾದವರು ಬನ್ನಿ ಎಂದು ಮುಖ್ಯಮಂತ್ರಿಗಳ ಮುಂದೆ ಸವಾಲು ಹಾಕಿದಾಗ ಅದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.