ಕುಲ್ಗಾಂ, ಜ 04 (DaijiworldNews/PY): "ಜಮ್ಮು-ಕಾಶ್ಮೀರದ ಕುಲ್ಗಾಂಂ ಜಿಲ್ಲೆಯ ಒಕೆ ಗ್ರಾಮದಲ್ಲಿ ಮಂಗಳವಾರ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ" ಎಂದು ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ಕಾಶ್ಮೀರ ವಲಯ ಪೊಲೀಸರು ತನ್ನ ಅಧಿಕೃತ ಖಾತೆಯಲ್ಲಿ ದೃಢಪಡಿಸಿದ್ದಾರೆ.
ಕುಲ್ಗಾಮ್ ಪ್ರದೇಶದ ಐಜಿಪಿ ವಿಜಯ್ ಕುಮಾರ್ ಮಾತನಾಡಿ, "ಮೃತಪಟ್ಟ ಇಬ್ಬರು ಭಯೋತ್ಪಾದಕರು ಸ್ಥಳೀಯರು ಹಾಗೂ ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್ಇಟಿ/ಟಿಆರ್ಎಫ್ನೊಂದಿಗೆ ಸಂಪರ್ಕ ಹೊಂದಿದ್ದಾರೆ. ಅವರು ಹಲವಾರು ಭಯೋತ್ಪಾದಕ ಅಪರಾಧಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿದುಬಂದಿದೆ" ಎಂದಿದ್ದಾರೆ.
"ಒಕೆ ಗ್ರಾಮದಲ್ಲಿ ಉಗ್ರಗಾಮಿಗಳು ಇರುವುದರ ಕುರಿತು ಖಚಿತ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರೆದಿದ್ದು, ಶೋಧ ಕಾರ್ಯಾಚರಣೆ ಆರಂಭಿಸಿದರು. ಶಂಕಿತ ಸ್ಥಳವನ್ನು ಸಮೀಪಿಸಿದ ವೇಳೆ, ಅಲ್ಲಿ ಅಡಗಿದ್ದ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ" ಎಂದು ತಿಳಿಸಿದ್ದಾರೆ.
"ಎನ್ಕೌಂಟರ್ನಲ್ಲಿ ಈವರೆಗೆ ಇಬ್ಬರು ಉಗ್ರರನ್ನು ಸದೆಬಡಿಯಲಾಗಿದೆ. ಕೂಂಬಿಂಗ್ ಕಾರ್ಯಾಚರಣೆ ಮುಂದುವರಿದಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.