ಬೆಂಗಳೂರು, ಜ 04 (DaijiworldaNews/HR): ಇಂದಿನ ಜನತೆ ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಹೊಣೆಗೇಡಿತನ ಎಂದು ಯುವಜನತೆ ಭಾವಿಸಿಕೊಂಡಿದ್ದರು. ಆದರೆ ರೌಡಿಸಂ ಕೂಡಾ ಅದರ ಅವಿಭಾಜ್ಯ ಅಂಗ ಅನ್ನುವುದು ಈಗ ಜಗಜ್ಜಾಹೀರಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಮುಜುಗರವಿಲ್ಲದೆ ಈ 'ರಿಪಬ್ಲಿಕ್ ಆಫ್ ರೌಡಿಸಂ' ಅನ್ನು ಸಮರ್ಥಿಸಿಕ್ಕೊಳ್ಳುವ ವ್ಯಕ್ತಿಗಳು ಕೂಡಾ ಕಾಂಗ್ರೆಸ್ ಕುಸಂಸ್ಕೃತಿಯ ಪಾಲುದಾರರು" ಎಂದಿದ್ದಾರೆ.
ನಮ್ಮ ರಕ್ತವೇ ಬೇರೆ ಅನ್ನುವ ಕೆಪಿಸಿಸಿ ಅಧ್ಯಕ್ಷರೇ, ನಿಮ್ಮ ರಕ್ತದ ಮಾದರಿ ಪರೀಕ್ಷೆಗೆ ಸಮಯ ವ್ಯಯ ಮಾಡಬೇಡಿ! ನಿಮ್ಮ ರಕ್ತದ ಗುಣ ನಿನ್ನೆ ನಿಮ್ಮ ಸಹೋದರ ಸಾರ್ವಜನಿಕವಾಗಿ ತೋರಿಸಿದ್ದಾರೆ. ನಿನ್ನೆಯೇ ಅದರ ಪರೀಕ್ಷೆ ಮತ್ತು ಫಲಿತಾಂಶ ರಾಜ್ಯದ ಜನತೆಗೆ ಸಿಕ್ಕಿದೆ.ಕಾಂಗ್ರೆಸ್ ಸಂಸ್ಕೃತಿಯನ್ನು ರಾಜ್ಯದ ಜನರಿಗೆ ಪರಿಚಯಿಸಿದ ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ರವರಿಗೆ ಧನ್ಯವಾದ. ಸಾರ್ವಜನಿಕವಾಗಿ ತೋಳೇರಿಸಿ ಸಚಿವರ ಕಡೆ ನುಗ್ಗುವ ನಿಮ್ಮ ರಾಜಕೀಯ ದಾರ್ಷ್ಟ್ಯ ಪ್ರಜಾಪ್ರಭುತ್ವಕ್ಕೆ ಸೂಕ್ತವೇ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಸುಳ್ಳರೆಲ್ಲ ಸೇರಿ ಕಟ್ಟುತ್ತಿರುವ ಸಾಮ್ರಾಜ್ಯದ ಒಂದು ಮುಖ ಸಿದ್ದರಾಮಯ್ಯನವರ ರೂಪದಲ್ಲಿ ಮತಾಂತರ ನಿಷೇಧ ಕಾಯಿದೆಯ ಸಂದರ್ಭದಲ್ಲಿ ಹೊರಬಿತ್ತು.ಸುಪ್ರೀಂಕೋರ್ಟ್ ಹಾಗೂ ಎನ್ಜಿಟಿ ತೀರ್ಪಿಗಾಗಿ ಕಾಯುತ್ತಿರುವ ಮೇಕೆದಾಟು ಯೋಜನೆ ಪಾದಯಾತ್ರೆಯ ನಾಟಕದಲ್ಲಿ ಹೊರಬಿದ್ದದ್ದು ನಿಮ್ಮ ರಾಜಕೀಯ ಪಾದಯಾತ್ರೆ ಗಿಮಿಕ್ಕಿನ ಎರಡನೆ ಮುಖ. ನಿನ್ನೆ ನಿಮ್ಮ ತಮ್ಮನ ರೂಪದಲ್ಲಿ ಅನಾವಾರಣಗೊಂಡಿದ್ದು ನಿಮ್ಮ ಪಕ್ಷದ ರೌಡಿಸಂನ ಮೂರನೆಯ ಮುಖ. ಗೋಸುಂಬೆಗಿಂತ ಹೆಚ್ಚು ಬಾರಿ ಬಣ್ಣ ಬದಲಾವಣೆ ಮಾಡುತ್ತಿರುವ ಕಾಂಗ್ರೆಸ್ ಅನ್ನು ನೋಡಿ ಗೋಸುಂಬೆಯೂ ಮುಖಮುಚ್ಚಿಕೊಂಡಿದೆಯಂತೆ" ಎಂದು ಹೇಳಿದ್ದಾರೆ.