ಲಖನೌ, ಜ 04 (DaijiworldNews/PY): ಕಾಂಗ್ರೆಸ್ ನಾಯಕರನ್ನು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಆಕಸ್ಮಿಕ ಹಿಂದೂಗಳು ಎಂದು ಕರೆದರೆ, ಉಪ ಮುಖ್ಯಮಂತ್ರಿ ಕೇಶವ್ ಮೌರ್ಯ ಚುನಾವಣಾ ಹಿಂದೂಗಳು ಎಂದಿದ್ಧಾರೆ.
ಅಮೇಥಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಯೋಗಿ, "ಈ ನಾಯಕರು ಚುನಾವಣೆಯ ಸಂದರ್ಭದಲ್ಲಿ ಹಿಂದೂಗಳಾಗುತ್ತದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ದೇವಾಲಯದಲ್ಲಿ ಕುಳಿತುಕೊಳ್ಳಲು ಸಹ ಗೊತ್ತಿಲ್ಲ. ಅವರಿಗೆ ಹಿಂದೂ ಧರ್ಮ ಅಥವಾ ಹಿಂದುತ್ವದ ಬಗ್ಗೆ ಏನೂ ಗೊತ್ತಿಲ್ಲ" ಎಂದು ಲೇವಡಿ ಮಾಡಿದ್ದಾರೆ.
"ರಾಹುಲ್ ಗಾಂಧಿ ಅವರು ಗುಜರಾತ್ ಚುನಾವಣೆಯ ವೇಳೆ ದೇವಸ್ಥಾನಕ್ಕೆ ತೆರಳಿ ಅಲ್ಲಿ ನಮಾಜ್ ಮಾಡುವಂತೆ ಕುಳಿತರು. ಈ ವೇಳೆ ಅರ್ಚಕರು ಅವರನ್ನು ಎಚ್ಚರಿಸಿದರು. ದೇವಾಲಯದಲ್ಲಿ ಯಾವ ರೀತಿ ಕುಳಿತುಕೊಳ್ಳಬೇಕು ಎನ್ನುವುದನ್ನು ಅವರಿಗೆ ತಿಳಿಸಿಕೊಟ್ಟರು" ಎಂದು ವ್ಯಂಗ್ಯವಾಡಿದ್ದಾರೆ.
ಇತ್ತೀಚೆಗೆ ಅಮೇಥಿಗೆ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹಿಂದೂ ಹಾಗೂ ಹಿಂದುತ್ವದ ನಡುವಣ ವ್ಯತ್ಯಾಸವನ್ನು ವಿವರಿಸಲು ಯತ್ನಿಸಿದ್ದರು. ಮಹಾತ್ಮ ಗಾಂಧಿ ಹಿಂದೂ, ಗೋಡ್ಸೆಯನ್ನು ಹಿಂದುತ್ವವಾದಿ ಎಂದಿದ್ದರು.