ಲಖನೌ, ಜ 04 (DaijiworldNews/PY): ವಿಧಾನಸಭೆ ಚುನಾವಣೆಯ ಬಳಿಕ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಸರ್ಕಾರ ರಚಿಸುವುದಾಗಿಯೂ, ಬಳಿಕ ರಾಮ ರಾಜ್ಯ ಸ್ಥಾಪನೆಯಾಗುವುದಾಗಿಯೂ ಪ್ರತಿದಿನ ಶ್ರೀಕೃಷ್ಣ ಕನಸಿನಲ್ಲಿ ಬಂದು ಹೇಳುತ್ತಿದ್ಧಾನೆ ಎಂದು ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ತಿಳಿಸಿದ್ದಾರೆ.
ಬಿಜೆಪಿಯ ಬಹ್ರೈಚ್ ಶಾಸಕಿ ಮಾಧುರಿ ವರ್ಮಾ ಅವರ ಸೇರ್ಪಡೆ ಸಮಾರಂಭದಲ್ಲಿ ಮಾತನಾಡಿರುವ ಅವರು, ಕನಸಿನಲ್ಲಿ ಶ್ರೀಕೃಷ್ಣ ಬರುತ್ತಿರುವುದಾಗಿ ಹಾಸ್ಯಭರಿತವಾಗಿ, ಲಘುಬಗೆಯಲ್ಲಿ ಹೇಳಿದ್ದಾರೆ.
ಬಹ್ರೈಚ್ ಜಿಲ್ಲೆಯ ನಾನ್ಪಾರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬಿಜೆಪಿಯ ಮಾಧುರಿ ವರ್ಮಾ ಸೋಮವಾರ ಎಸ್ಪಿ ಸೇರ್ಪಡೆಯಾದರು. ಯಾದವ್ ಅವರು ಮಾಧುರಿ ಸೇರ್ಪಡೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಉತ್ತರಪ್ರದೇಶದಲ್ಲಿ ಎಸ್ಪಿ ಸರ್ಕಾರ ರಚಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಮಾಜವಾದ ಸ್ಥಾಪನೆಯಾದ ದಿನ, ರಾಜ್ಯದಲ್ಲಿ ರಾಮ ರಾಜ್ಯ ಸ್ಥಾಪನೆಯಾಗುತ್ತದೆ. ಉತ್ತರ ಪ್ರದೇಶದಲ್ಲಿ ನಮ್ಮ ಸರ್ಕಾರ ರಚನೆಯಾಗಲಿದೆ ಎಂದು ಹೇಳಲು ಶ್ರೀಕೃಷ್ಣ ಪ್ರತಿದಿನ ರಾತ್ರಿ ನನ್ನ ಕನಸಿನಲ್ಲಿ ಬರುತ್ತಾನೆ ಎಂದಿದ್ದಾರೆ.