ಬೆಳಗಾವಿ, ಜ 03 (DaijiworldNews/HR): ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಮೈಮೇಲೆ ದೆವ್ವ ಬಂದವರಂತೆ ವರ್ತಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.
ಈ ಕುರಿತು ಮಾತನಾಡಿದ ಅವರು, ಮೇಕೆದಾಟು ಯೋಜನೆ ವಿಚಾರವಾಗಿ ಸ್ಫೋಟಕ ಮಾಹಿತಿ ನೀಡುವುದಾಗಿ ಹೇಳಿದಷ್ಟೆ, ಅಷ್ಟರಲ್ಲಿಯೇ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಮೈಮೇಲೆ ದೆವ್ವ ಬಂದವರಂತೆ ವರ್ತಿಸುತ್ತಿದ್ದಾರೆ ಎಂದಿದ್ದಾರೆ.
ಇನ್ನು "ಕಾಂಗ್ರೆಸ್ ನ ಪುಡಿ ರಾಜಕಾರಣಿಗಳಿಗೆ ಸಂಸ್ಕಾರವಿಲ್ಲ. ನನ್ನ ವಿರುದ್ಧ ಮನಬಂದಂತೆ ಮಾತನಾಡುತ್ತಿದ್ದಾರೆ. ಆದರೆ ನಾನು ಹೊಣೆಗೇಡಿತನದಿಂದ ಮಾತನಾಡುವ ವ್ಯಕ್ತಿಯಲ್ಲ" ಎಂದರು.
"ಮೇಕೆದಾಟು ವಿಷಯ ನ್ಯಾಯಾಲಯ ಅಂಗಳದಲ್ಲಿರುವುದರಿಂದ ತೀರ್ಪು ಪ್ರಕಟವಾದ ನಂತರ ದಾಖಲೆ ಬಿಡುಗಡೆಗೊಳಿಸುತ್ತೇನೆ. ನಾನು ಬುಟ್ಟಿಯಲ್ಲಿ ಹಾವು ಇದೆ ಎಂದು ಹೇಳಿದ್ದೇನೆಯೇ ಹೊರತು ತೋರಿಸಿಲ್ಲ. ಆದರೆ ಕಾಂಗ್ರೆಸ್ ನವರು ಹಾವಿಗಾಗಿ ಹುಡುಕಾಟ ನಡೆಸಿದ್ದಾರೆ" ಎಂದು ಹೇಳಿದ್ದಾರೆ.