ಹುಬ್ಬಳ್ಳಿ, ಜ 03 (DaijiworldNews/PY): "ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಮೇಕೆದಾಟು ಎನ್ನುತ್ತಾ ಪಾದಯಾತ್ರೆ, ಪ್ರತಿಭಟನೆಯ ನಾಟಕವಾಡುತ್ತಿದೆ. ಇದನ್ನು ಬಿಟ್ಟು ಸರ್ಕಾರದೊಂದಿಗೆ ಯೋಜನೆ ಅನುಷ್ಠಾನಕ್ಕೆ ಕೈಜೋಡಿಸಲಿ" ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮೇಕೆದಾಟು ಯೋಜನೆ ಅನುಷ್ಠಾನದಲ್ಲಿ ಕಾನೂನಿನ ತೊಡಕುಗಳಿವೆ. ಈ ಬಗ್ಗೆ ಎಲ್ಲಾ ಪಕ್ಷದವರು ಕೂತು ಸಮಾಲೋಚಿಸಿ, ಪರಿಹಾರ ಕಂಡುಕೊಳ್ಳಬೇಕಿದೆ. ಆದರೆ, ಕಾಂಗ್ರೆಸ್ ಪಾದಯಾತ್ರೆ ಎಂದು ಹೇಳುತ್ತಾ, ರಾಜಕೀಯ ಮಾಡುತ್ತಿದೆ" ಎಂದು ಕಿಡಿಕಾರಿದ್ದಾರೆ.
"ಈ ಹಿಂದೆ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರು ಸರ್ಕಾರ ನಡೆಸಿದವರು. ಆಗಲೇ ಏಕೆ ಅವರು ಯೋಜನೆ ಅನುಷ್ಠಾನಗೊಳಿಸಿಲ್ಲ. ವಿರೋಧ ಪಕ್ಷದಲ್ಲಿದ್ದಾಗ ಒಂದು ನಡವಳಿಕೆ, ಆಡಳಿತ ಪಕ್ಷದಲ್ಲಿದ್ದಾಗ ಇನ್ನೊಂದು ನಡವಳಿಕೆ ಸರಿಯಲ್ಲ. ಮೇಕೆದಾಟು ಯೋಜನೆ ಅನುಷ್ಠಾನ ರಾಜ್ಯದ ಹಕ್ಕು"ಎಂದಿದ್ದಾರೆ.