ಬೆಂಗಳೂರು, ಜ 03 (DaijiworldNews/PY): "ಕೋವಿಡ್ನಿಂದ ಮಕ್ಕಳ ಶಿಕ್ಷಣ ಅಪೂರ್ಣವಾಗಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಪ್ರತಿ ಪೋಷಕರು ಮಕ್ಕಳಿಗೆ ಲಸಿಕೆ ಹಾಕಿಸಬೇಕು" ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆ ಅಭಿಯಾನ ಆರಂಭಿಸಿದ್ದಾರೆ. ಕೋವಿಡ್ ನಿಂದ ಮಕ್ಕಳ ಶಿಕ್ಷಣ ಅಪೂರ್ಣವಾಗಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಪ್ರತಿ ಪೋಷಕರು ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡುತ್ತೇನೆ" ಎಂದಿದ್ದಾರೆ.
"ಕೋವಿಡ್ ಲಸಿಕೆ ಪಡೆದ ನಂತರವೂ, ಸೂಕ್ತ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕು. ಈ ಮೂಲಕ ಸಂಭವನೀಯ ಮೂರನೇ ಅಲೆ ಬಾರದಂತೆ ತಡೆಗಟ್ಟಬೇಕು" ಎಂದು ಕೋರುತ್ತೇನೆ ಎಂದು ತಿಳಿಸಿದ್ದಾರೆ.
"ಕೊರೊನಾದೊಂದಿಗೆ ಜೀವನ ಮಾಡುವುದು ಅನಿವಾರ್ಯ ಆಗಿದೆ. ಆದರೂ, ಕೊರೊನಾ ಎದುರಿಸಲು ಎಲ್ಲರಿಗೂ ಉಚಿತ ಲಸಿಕೆ ನೀಡುವ ಪ್ರಯತ್ನವನ್ನು ಪ್ರಧಾನಿ ಮೋದಿ ಅವರು ಮಾಡುತ್ತಿದ್ಧಾರೆ. ಈಗಾಗಲೇ 145 ಕೋಟಿಗೂ ಅಧಿಕ ಜನರಿಗೆ ಮೊದ ಹಾಗೂ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಸಿಎಂ ಅವರ ನೇತೃತ್ವದಲ್ಲಿ ಇಂದಿನಿಂದ 15-18 ವರ್ಷದ ಮಕ್ಕಳಿಗೆ ಉಚಿತ ಲಸಿಕೆ ನೀಡಲಾಗುತ್ತಿದೆ. ಈ ಪ್ರಕ್ರಿಯೆಗೆ ಎಲ್ಲರೂ ಇದಕ್ಕೆ ಕೈ ಜೋಡಿಸಬೇಕು" ಎಂದು ಮನವಿ ಮಾಡಿಕೊಂಡಿದ್ದಾರೆ.