ಪಂಜಾಬ್ ಜ 03 (DaijiworldNews/PY): ಗುತ್ತಿಗೆ ನೌಕರರ ಮುಷ್ಕರದ ಕಾರಣದಿಂದ ಹೆದ್ದಾರಿಯಲ್ಲಿ ಸಾಗುತ್ತಿದ್ದ ಆಂಬ್ಯುಲೆನ್ಸ್ನಲ್ಲಿದ್ದ ಶಿಶುವೊಂದು ಸಾವನ್ನಪ್ಪಿದ ಘಟನೆ ಅಮೃತಸರ-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಪಂಜಾಬ್ ಠೇಕಾ ಮುಲಾಜಾಮ್ ಒಕ್ಕೂಟವು ಖನ್ನಾ ಬಳಿ ಹೆದ್ದಾರಿಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದು, ಧರಣಿ ಇಟ್ಟುಕೊಂಡಿತ್ತು. ಪ್ರತಿಭಟನಾಕಾರರು ರಸ್ತೆಗಳ ಮೇಲೆ ಟೆಂಟ್ಗಳನ್ನು ಹಾಕಿಕೊಂಡಿದ್ದ ಕಾರಣ ರಸ್ತೆಯಲ್ಲಿ ಸಂಚರಿಸಲು ಸಾರ್ವಜನಿಕರಿಗೆ ಕಷ್ಟವಾಗುತ್ತಿತ್ತು. ಈ ಬಗ್ಗೆ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಮಂಜಿತ್ ಕೌರ್ ಸ್ಪಷ್ಟನೆ ನೀಡಿದ್ದು, ಆಂಬ್ಯುಲೆನ್ಸ್ಗೆ ತೆರಳಲು ಪ್ರತಿಭಟನಾಕಾರರು ದಾರಿ ಮಾಡಿಕೊಟ್ಟಿದ್ದು, ಶಿಶು ಸಾವನ್ನಪ್ಪಲು ಟ್ರಾಫಿಕ್ ಜಾಮ್ ಕಾರಣವಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದಿದ್ದಾರೆ.
ಈ ಬಗ್ಗೆ ತದ್ವಿರುದ್ದವಾಗಿ ಹೇಳಿಕೆ ನೀಡಿರುವ ಸಂತ್ರಸ್ತರಾದ ಸೋನಿ ಹಾಗೂ ಮತ್ತವರ ಪತ್ನಿ ಕಾಜಲ್, ಅನಾರೋಗ್ಯಕ್ಕೀಡಾದ ತಮ್ಮ ಒಂದು ತಿಂಗಳ ಮಗ ಆರವ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭ ಪ್ರತಿಭಟನಾಕಾರರು ಹೆದ್ದಾರಿ ಬಂದ್ ಮಾಡಿದ್ದರಿಂದ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದೆವು. ಪ್ರತಿಭಟನಾಕಾರರಲ್ಲಿ ಪದೇ ಪದೇ ಬೇಡಿಕೊಂಡರೂ ಸಹ ಮುಂದೆ ಸಾಗಲು ದಾರಿ ಬಿಡಲಿಲ್ಲ ಎಂದು ಹೇಳಿದ್ದಾರೆ.