ನವದೆಹಲಿ, ಜ 03 (DaijiworldNews/HR): ದೇಶಾದ್ಯಂತ ಇಂದಿನಿಂದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ಅಭಿಯಾನ ಆರಂಭವಾಗಿದ್ದು, ಕೊವಾಕ್ಸಿನ್ ಲಸಿಕೆಯನ್ನು ಮಾತ್ರ ನೀಡಲು ಅನುಮೋದನೆ ನೀಡಲಾಗಿದ್ದು ಬೇರೆ ಲಸಿಕೆಗಳನ್ನು ನೀಡದಂತೆ ತೀವ್ರ ಎಚ್ಚರ ವಹಿಸಲು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದ್ದಾರೆ.
ಭಾನುವಾರ ಸಂಜೆ 7.50ರವರೆಗೆ, 15 ರಿಂದ 18 ವರ್ಷದೊಳಗಿನ 6.35 ಲಕ್ಷಕ್ಕೂ ಹೆಚ್ಚು ಮಕ್ಕಳು ಕೋವಿನ್ ಪೋರ್ಟಲ್ ನಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಮನ್ಸುಖ್ ಮಾಂಡವೀಯ, "ಮಕ್ಕಳಿಗೆ ಕೊರೊನಾ ಲಸಿಕೆ ನೀಡುವಾಗ ಗೊಂದಲ ಉಂಟಾಗದಂತೆ ತಡೆಯಲು ಪ್ರತ್ಯೇಕ ಕೊರೊನಾ ಲಸಿಕೆ ಕೇಂದ್ರಗಳು, ಪ್ರತ್ಯೇಕ ಸೆಷನ್ ಕೇಂದ್ರಗಳು, ಪ್ರತ್ಯೇಕ ಸರದಿ ಸಾಲು ಮತ್ತು ಪ್ರತ್ಯೇಕ ಲಸಿಕೆ ತಂಡವನ್ನು ರಚಿಸಲಾಗುತ್ತದೆ" ಎಂದರು.
"ಇನ್ನು ಹಲವು ದೇಶಗಳಲ್ಲಿ ಈಗಾಗಲೇ ಮೂರ್ನಾಲ್ಕು ಪಟ್ಟು ಕೊರೊನಾ ಕೇಸುಗಳು ಹೆಚ್ಚಳವಾಗಿದ್ದು, ಕಳೆದ ಬಾರಿ ಕೊರೊನಾದ ಎರಡನೇ ಅಲೆಯಂತೆ ಈ ಬಾರಿ ಕೂಡ ಹೆಚ್ಚಳವಾದರೆ ದೇಶದ ವೈದ್ಯಕೀಯ ವ್ಯವಸ್ಥೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ" ಎಂದು ಎಚ್ಚರಿಕೆ ನೀಡಿದ್ದಾರೆ.
ಮಕ್ಕಳಿಗೆ ಕೊವಾಕ್ಸಿನ್ ಲಸಿಕೆ ಅಭಿಯಾನದ ಮಾರ್ಗಸೂಚಿಗಳ ಪ್ರಕಾರ, ಕೋವಿನ್ ನಲ್ಲಿ ಅಸ್ತಿತ್ವದಲ್ಲಿರುವ ಖಾತೆಯ ಮೂಲಕ ಆನ್ಲೈನ್ನಲ್ಲಿ ಸ್ವಯಂ-ನೋಂದಣಿ ಮಾಡಿಕೊಳ್ಳಬಹುದು ಅಥವಾ ಇತರ ಎಲ್ಲಾ ವರ್ಗದ ಫಲಾನುಭವಿಗಳಂತೆಯೇ ಮೊಬೈಲ್ ಸಂಖ್ಯೆಯ ಮೂಲಕ ನೋಂದಾಯಿಸಿಕೊಳ್ಳಬಹುದು.