ಮೈಸೂರು, ಜ.03 (DaijiworldNews/PY): "ಜನರ ಆರೋಗ್ಯದ ದೃಷ್ಟಿಯಿಂದ ಕಾಂಗ್ರೆಸ್ನವರು ಮೇಕೆದಾಟು ಪಾದಯಾತ್ರೆ ಕೈ ಬಿಡಬೇಕು" ಎಂದು ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬೇರೆ ರಾಜ್ಯಗಳಲ್ಲೂ ಹಾಗೂ ವಿದೇಶಗಳಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಎರಡನೇ ಅಲೆಯ ಸಂದರ್ಭ ಸಾಕಷ್ಟು ಅನಾಹುತವಾಗಿದೆ. ಈ ರೀತಿ ಮೂರನೇ ಅಲೆಯಲ್ಲಿ ಆಗಬಾರದು. ಇದನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು" ಎಂದಿದ್ದಾರೆ.
"ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ಗೆ ಮಾಡಲು ಬೇರೆ ಏನೂ ಕೆಲಸವಿಲ್ಲ. ಅವರಿಗೆ ಪಾದಯಾತ್ರೆ ಒಂದು ಚುನಾವಣಾ ಗಿಮಿಕ್. ಸಮ್ಮಿಶ್ರ ಸರ್ಕಾರ ಇದ್ದಾಗಲೂ ಈ ಯೋಜನೆಯ ಬಗ್ಗೆ ಮಾತನಾಡಲಿಲ್ಲ. ಇದೀಗ ರಾಜಕೀಯ ಕಾರಣಕ್ಕೆ ಪಾದಯಾತ್ರೆ ಎನ್ನುವ ಗಿಮಿಕ್ ಮಾಡುತ್ತಿದ್ದಾರೆ. ಇದು ಜನರಿಗೆ ತಿಳಿಯುತ್ತದೆ" ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಲಾಕ್ಡೌನ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಕೇಂದ್ರ ಸರ್ಕಾರ ಹಾಗೂ ತಜ್ಞರ ಸಲಹೆಯ ಮೇರೆಗೆ ತೀಮಾನ ಕೈಗೊಳ್ಳಲಾಗುವುದು. ಅವರು ಕಠಿಣ ಕ್ರಮ ಸೇರಿ ಯಾವುದೇ ಸಲಹೆ ನೀಡಿದರೂ ಪಾಲಿಸುತ್ತೇವೆ. ಸದ್ಯಕ್ಕೆ ನಮ್ಮಲ್ಲಿ ಬೇರೆ ರಾಜ್ಯದಷ್ಟು ಸಮಸ್ಯೆಯಾಗಿಲ್ಲ. ಜನರು ಸಹಕಾರ ನೀಡುತ್ತಿದ್ಧಾರೆ. ಎರಡು ದಿನಕ್ಕೊಮ್ಮೆ ಸಿಎಂ ನೇತೃತ್ವದ ಸಭೆ ನಡೆಯುತ್ತಿದೆ" ಎಂದಿದ್ದಾರೆ.