ಬೆಂಗಳೂರು, ಜ. 03 (DaijiworldNews/HR): ರಾಜ್ಯದಲ್ಲಿ ಒಮೈಕ್ರಾನ್ ಮತ್ತು ಕೊರೊನಾ ಸೋಂಕು ಸಂಖ್ಯೆ ಹೆಚ್ಚಾಗುತ್ತಿದ್ದು, ಗುರುವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ನಿಯಂತ್ರಣ ಕ್ರಮಗಳ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೊರೊನಾ ಮತ್ತು ಒಮೈಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಮನಿಸುತ್ತಿದ್ದೇವೆ. ಅಕ್ಕಪಕ್ಕದ ರಾಜ್ಯಗಳಲ್ಲಿ ವೇಗವಾಗಿ ಹರಡುತ್ತಿದೆ. ನಾಳೆ ಸಾಯಂಕಾಲ ತಜ್ಞರ ಜೊತೆ ಸಭೆ ಮಾಡುತ್ತೇವೆ" ಎಂದರು.
ಇನ್ನು "ಕೊರೊನಾ ಹಾಗೂ ಓಮೈಕ್ರಾನ್ ಸೋಂಕು ತಡೆಗಟ್ಟಲು ಬೇಕಾದ ವರದಿಯನ್ನು ತಜ್ಞರಿಂದ ಕೇಳಿದ್ದೇವೆ. ಗುರುವಾರ ಕ್ಯಾಬಿನೆಟ್ ನಲ್ಲಿ ಒಟ್ಟಾರೆ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ" ಎಂದಿದ್ದಾರೆ.
"ಇಂದಿನಿಂದ ರಾಜ್ಯಾದ್ಯಂತ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ಅಭಿಯಾನ ಪ್ರಾರಂಭವಾಗಿದ್ದು, ತಪ್ಪದೇ ಲಸಿಕೆ ಪಡೆಯಿರಿ. ಮಾಸ್ಕ್ ಧರಿಸಿ, ಭೌತಿಕ ಅಂತರ ಕಾಯ್ದುಕೊಳ್ಳಿ, ನೈರ್ಮಲ್ಯ ಪಾಲಿಸಿ, ಸುರಕ್ಷತಾ ನಿಯಮಗಳನ್ನು ನಿರ್ಲಕ್ಷಿಸಬೇಡಿ. ಆತಂಕ ಬೇಡ, ಮುನ್ನೆಚ್ಚರಿಕೆ ಇರಲಿ" ಎಂದು ಹೇಳಿದ್ದಾರೆ.