ಬೆಂಗಳೂರು, ಜ.03 (DaijiworldNews/PY): "ತಮಿಳುನಾಡು ಸರ್ಕಾರ ಕೇವಲ ರಾಜಕೀಯ ಉದ್ದೇಶಕ್ಕಾಗಿ ಮೇಕೆದಾಟು ಯೋಜನೆಗೆ ತಕರಾರು ಮಾಡುತ್ತಿದೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ತಮಿಳುನಾಡು ಸರ್ಕಾರ ಕೇವಲ ರಾಜಕೀಯ ಉದ್ದೇಶಕ್ಕಾಗಿ ಮೇಕೆದಾಟು ಯೋಜನೆಗೆ ತಕರಾರು ಮಾಡುತ್ತಿದೆ. ಯೋಜನೆ ಜಾರಿ ಮಾಡದಂತೆ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೋರೆ ಹೋಗಿದ್ದರೂ ನ್ಯಾಯಾಲಯ ಅವರ ಮನವಿಯನ್ನು ಪುರಸ್ಕರಿಸಿಲ್ಲ" ಎಂದಿದ್ಧಾರೆ.
"ತಮಿಳುನಾಡು ಬಿಜೆಪಿಯ ರಾಜ್ಯಾಧ್ಯಕ್ಷ ಅಣ್ಣಾಮಲೈ ಮೇಕೆದಾಟು ಯೋಜನೆ ಜಾರಿ ಮಾಡಬಾರದು ಎಂದು ಧರಣಿ ಕೂತಿದ್ದಾರೆ. ತಮಿಳುನಾಡಿನ ಬಿಜೆಪಿ ಉಸ್ತುವಾರಿ ಸಿ ಟಿ ರವಿ ಅವರು ಪಕ್ಷದ ಹಿತಕಾಯಲು ರಾಜ್ಯದ ಹಿತ ಮರೆತು ಮೇಕೆದಾಟು ವಿರೋಧಿಸುತ್ತಿದ್ದಾರೆ. ಹೀಗಾಗಿಯೇ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡುತ್ತಿಲ್ಲ" ಎಂದು ತಿಳಿಸಿದ್ದಾರೆ.
"ನಾನು ಮುಖ್ಯಮಂತ್ರಿ ಆಗಿದ್ದಾಗ ಸುಮಾರು 10,000 ಕೋಟಿಗೂ ಅಧಿಕ ಹಣವನ್ನು ಚಾಮರಾಜನಗರದ ಅಭಿವೃದ್ಧಿಗೆ ಕೊಟ್ಟಿದ್ದೆ. ಕೃಷಿ ಮತ್ತು ಕಾನೂನು ಕಾಲೇಜು, ಸರ್ಕಾರಿ ಆಸ್ಪತ್ರೆ, ದ್ವಿಪಥ ರಸ್ತೆಗಳು ಇವೆಲ್ಲ ನಮ್ಮ ಸರ್ಕಾರದ ಕೊಡುಗೆಗಳು. ಚಾಮರಾಜನಗರಕ್ಕೆ ಬಿಜೆಪಿ ಸರ್ಕಾರದ ಕೊಡುಗೆ ಶೂನ್ಯ" ಎಂದು ಟೀಕಿಸಿದ್ಧಾರೆ.
"1968 ರಲ್ಲೇ ಕಾಂಗ್ರೆಸ್ ಸರ್ಕಾರ ಮೇಕೆದಾಟು ಯೋಜನೆ ಜಾರಿಗೆ ಪ್ರಯತ್ನ ಮಾಡಿತ್ತು, ಆದರೆ ಆಗ ಕಾವೇರಿ ಜಲ ವಿವಾದ ನ್ಯಾಯಾಲಯದಲ್ಲಿ ಇದ್ದುದ್ದರಿಂದ ಅನುಷ್ಠಾನ ಸಾಧ್ಯವಾಗಲಿಲ್ಲ. 2017 ರಲ್ಲಿ ನಮ್ಮ ಸರ್ಕಾರ ಈ ಯೋಜನೆಯ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ, ಕೇಂದ್ರದ ಅನುಮತಿಗಾಗಿ ಕಳುಹಿಸಿತ್ತು" ಎಂದಿದ್ದಾರೆ.
"ಕಾಂಗ್ರೆಸ್- ಜೆಡಿಎಸ್ ಪಕ್ಷಗಳ ಸಮ್ಮಿಶ್ರ ಸರ್ಕಾರ ಬಂದಮೇಲೆ ಸಚಿವರಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತೆ ರೂ. 9,500 ಕೋಟಿಯ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದರು. ಆಗಲೂ ಕೇಂದ್ರ ಬಿಜೆಪಿ ಸರ್ಕಾರ ಅನುಮತಿ ಕೊಟ್ಟಿಲ್ಲ" ಎಂದು ಹೇಳಿದ್ದಾರೆ.
"ಹೇಮಾವತಿ, ಕಬಿನಿ, ಕೆಆರ್ಎಸ್ ನಲ್ಲಿ ನೀರಿದ್ದರೆ ಮಾತ್ರ ಚಾಮರಾಜನಗರ, ಮೈಸೂರು, ತುಮಕೂರು, ಮಂಡ್ಯ ಜಿಲ್ಲೆಯ ಕೃಷಿ ಚಟುವಟಿಕೆಗಳಿಗೆ ನೀರು ಸಿಗೋದು. ಹೀಗಾಗಿ ಮನೆಗೊಂದು ಆಳಿನಂತೆ ಮೇಕೆದಾಟು ಪಾದಯಾತ್ರೆಯಲ್ಲಿ ತಪ್ಪದೇ ಭಾಗವಹಿಸಬೇಕು ಎಂದು ತಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ" ಎಂದಿದ್ದಾರೆ.