ಬೆಂಗಳೂರು, ಜ.02 (DaijiworldNews/PY): "ಕಾಂಗ್ರೆಸ್ಸಿಗರು ಪಾದಯಾತ್ರೆಯ ಜೊತೆ ಸುಳ್ಳಿನಜಾತ್ರೆ ಮಾಡುತ್ತಿದ್ದಾರೆ" ಎಂದು ಬಿಜೆಪಿ ಆರೋಪಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, "ಮೇಕೆದಾಟು ಪಾದಯಾತ್ರೆ ಹೆಸರಿನಲ್ಲಿ ಸುಳ್ಳಿನ ಮೆರವಣಿಗೆ ನಡೆಸುತ್ತಿರುವ ಕಾಂಗ್ರೆಸ್ಸಿಗರೇ, ಮೇಕೆದಾಟು ಯೋಜನೆಗೆ ಡಿಪಿಆರ್ ತಯಾರಿಸಿದ್ದು ಯಾರು? ಡಿಪಿಆರ್ ತಯಾರು ಮಾಡಿದ್ದು ನಾನೇ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಸತ್ಯ ಯಾವುದು, ಮಿಥ್ಯೆ ಯಾವುದು?" ಎಂದು ಪ್ರಶ್ನಿಸಿದೆ.
"ಮಾನ್ಯ ಸಿದ್ದರಾಮಯ್ಯ ಅವರೇ, ಮೇಕೆದಾಟು ಯೋಜನೆಗೆ ಡಿಪಿಆರ್ ತಯಾರಿ ಮಾಡಿದ್ದು ನನ್ನ ಸರ್ಕಾರ ಎಂದು ಹೇಳಿದ್ದೀರಿ. ಡಿಪಿಆರ್ ತಯಾರಾಗಿದ್ದು ನಮ್ಮ ಕಾಲದಲ್ಲಿ ಆಗಿದ್ದು ಎಂಬುದು ಕುಮಾರಸ್ವಾಮಿ ಅವರು ಹೇಳುತ್ತಿದ್ದಾರೆ. ಕಾಂಗ್ರೆಸ್ಸಿಗರು ಪಾದಯಾತ್ರೆಯ ಜೊತೆ ಸುಳ್ಳಿನಜಾತ್ರೆ ಮಾಡುತ್ತಿದ್ದಾರೆ" ಎಂದು ದೂರಿದೆ.
"ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಮೇಕೆದಾಟು ಯೋಜನೆಗೆ ಒಂದು ದಿಕ್ಕು ತೋರಿಸಲಿಲ್ಲ. ಏಕೆಂದರೆ ಅಧಿಕಾರದಲ್ಲಿದ್ದಾಗ ಅವರ ಸಂಪೂರ್ಣ ಗಮನ ಹಿಂದೂ ಕಾರ್ಯಕರ್ತರ ದಮನ, ಟಿಪ್ಪು ಸುಲ್ತಾನ ವೈಭವೀಕರಣದ ಮೇಲಿತ್ತು. ಮೇಕೆದಾಟು ಯೋಜನೆಯ ವಿಳಂಬಕ್ಕೆ ನಿಜವಾದ ಕಾರಣೀಕರ್ತರೆಂದರೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್" ಎಂದು ಟೀಕಿಸಿದೆ.