ಒಡಿಶಾ, ಜ.02 (DaijiworldNews/HR): ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಹೊಸ ವರ್ಷದ ಬಾಡೂಟಕ್ಕಾಗಿ ಪೊಲೀಸ್ ಅಧಿಕಾರಿಯೊಬ್ಬ ಕುರಿ ಕದ್ದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕುರಿ ಕದ್ದವರನ್ನು ಸಿಂಧೇಕೇಲಾ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ ಪೆಕ್ಟರ್ ಸುಮನ್ ಮಲ್ಲಿಕ್ ಎಂದು ಗುರುತಿಸಲಾಗಿದೆ.
ಇನ್ನು ಸ್ನೇಹಿತರೊಂದಿಗೆ ಸೇರಿ ಹೊಸ ವರ್ಷಾಚರಣೆ ಭರ್ಜರಿ ಆಚರಿಸಲು ಎಎಸ್ಐ, ಬಾಡೂಟಕ್ಕಾಗಿ ಎರಡು ಮೇಕೆಗಳನ್ನು ಕದ್ದಿದ್ದು, ಈ ಕೃತ್ಯ ಕುರಿ ಮಾಲೀಕನಿಗೆ ಗೊತ್ತಾಗಿದೆ. ಮಾಲೀಕ ಸಹಾಯಕ ಸಬ್ ಇನ್ಸ್ ಪೆಕ್ಟರ್ ಗೆ ತನ್ನ ಕುರಿಗಳು ವಾಪಸ್ ಕೊಡುವಂತೆ ಕೇಳಿದ್ದಾನೆ. ಆದರೆ ಅಧಿಕಾರದ ದರ್ಪದಿಂದಾಗಿ ಕುರಿಗಳನ್ನು ಹಿಂತಿರುಗಿಸದ ಅಧಿಕಾರಿ ಅವುಗಳನ್ನು ಕಡಿದು ಬಾಡೂಟ ಮಾಡಿದ್ದಾನೆ ಎನ್ನಲಾಗಿದೆ.
ಎಎಸ್ಐ ನಡೆಗೆ ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಮಸ್ಥರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಬಲಂಗೀರ್ ಪೊಲೀಸ್ ವರಿಷ್ಠಾಧಿಕಾರಿಯವರು ಎಎಸ್ಐಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.