ಬೆಂಗಳೂರು, ಜ.02 (DaijiworldNews/PY): "ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಪಾದಯಾತ್ರೆ ಕೈಗೊಳ್ಳಲು ಯಾರ ಅಪ್ಪಣೆಯ ಅವಶ್ಯಕತೆ ಇಲ್ಲ" ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಗೃಹ ಸಚಿವ ಆರಗ ಜ್ಞಾನೇಂದ್ರ ರಾಜಕೀಯವಾಗಿ ಎಳಸು. ಅವರು ವಯಸ್ಸಿನಲ್ಲಿ ಹಿರಿಯರಿದ್ದರೂ ಅವರಿಗೆ ತಿಳುವಳಿಕೆ ಕಡಿಮೆ. ಪಾದಯಾತ್ರೆಗೆ ಅವಕಾಶ ನೀಡುವ ಬಗ್ಗೆ ಏನೇನೋ ಮಾತನಾಡಿದ್ದಾರೆ" ಎಂದಿದ್ದಾರೆ.
"ಗೃಹ ಸಚಿವರಿಗೆ ಅನುಭವ ಇಲ್ಲ. ರಸ್ತೆಯಲ್ಲಿ ನಡೆಯುವುದಕ್ಕೆ ಇವರ ಅನುಮತಿ ಪಡೆಯಬೇಕಾ? ಹೋರಾಟ ಮಾಡುವುದಕ್ಕೆ ಇವರ ಅನುಮತಿ ಏಕೆ?" ಎಂದು ಕೇಳಿದ್ದಾರೆ.
"ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಏನೂ ಕಾರ್ಯ ಮಾಡಲಿಲ್ಲ ಎನ್ನುತ್ತಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೇ ಡಿಪಿಆರ್ ಮಾಡಿ ಕಳುಹಿಸಿದ್ದು, ಕೇಂದ್ರ ಪರಿಸರ ಇಲಾಖೆ ಕ್ರಿಯರೆನ್ಸ್ ಕೊಡಬೇಕಾಗಿದೆ. ಅದನ್ನು ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಕೊಡಲು ಆಗುವುದಿಲ್ಲ" ಎಂದಿದ್ಧಾರೆ.