ಬಾಗಲಕೋಟೆ, ಜ.02 (DaijiworldNews/PY): "ಗಾರ್ಮೆಂಟ್ ಕಾರ್ಮಿಕರಿಗೆ, ಹಿರಿಯ ನಾಗರಿಕರಿಗೆ ಉಚಿತ ಬಸ್ಪಾಸ್ ನೀಡಲು ಕ್ರಮ ಕೈಗೊಳ್ಳಲಾಗುವುದು" ಎಂದು ಸಾರಿಗೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಶಿಗಿಕೇರಿ ಬಾದಾಮಿ ರಸ್ತೆಯಲ್ಲಿ ಜಿಲ್ಲಾಡಳಿತ ಹಾಗೂ ಸಾರಿಗೆ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ನೂತನ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, "ಸಾರಿಗೆ ಇಲಾಖೆಯಲ್ಲಿ ಬದಲಾವಣೆ ತರುವ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ವರ್ಗದ ಮಕ್ಕಳಿಗೆ ಉಚಿತ ಬಸ್ಪಾಸ್, ಗಾರ್ಮೆಂಟ್ ಕಾರ್ಮಿಕರಿಗೆ, ಹಿರಿಯ ನಾಗರಿಕರಿಗೆ ಉಚಿತ ಬಸ್ಪಾಸ್ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ" ಎಂದಿದ್ದಾರೆ.
"ರಾಜ್ಯದ 5 ಜಿಲ್ಲೆಗಳಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥವನ್ನು ಮಾಡಲಾಗುತ್ತಿದೆ. ಲೈಸನ್ಸ್ ಪಡೆಯಬೇಕಾದರೆ ಪರೀಕ್ಷೆಯಲ್ಲಿ ಶೇ.69ರಷ್ಟು ಫಲಿತಾಂಶ ಬರಬೇಕು. ಈ ಮೊದಲು ಮ್ಯಾನುವಲ್ ಆಗಿ ಚಾಲನಾ ಪ್ರಮಾಣ ಪತ್ರ ನೀಡಲಾಗುತ್ತಿತ್ತು. ಈ ನೂತನ ತಂತ್ರಜ್ಞಾನ ಅಳವಡಿಸುವ ಮೂಲಕ ಚಾಲನಾ ಪರವಾನಿಗೆ ನೀಡುವ ಯೋಜನೆ ಜಾರಿಗೆ ತರಲಾಗಿದೆ" ಎಂದು ಹೇಳಿದ್ದಾರೆ.
"ಕೇಂದ್ರಸ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ರಸ್ತೆಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಈ ಮೊದಲು ಒಂದು ದಿನಕ್ಕೆ 15 ಕಿ.ಮೀ ರಸ್ತೆ ಮಾಡಲಾಗುತ್ತಿತ್ತು. ಈಗ 38-45ಕಿ.ಮೀ ವರೆಗೆ ಮಾಡಲಾಗುತ್ತಿದೆ. ರಸ್ತೆಗಳು ಉತ್ತಮವಾಗಿದ್ದಲ್ಲಿ ಮಾತ್ರವೇ ಸುಗಮ ಕಾರ್ಯ ಕೈಗೊಳ್ಳಲು ಸಾಧ್ಯ" ಎಂದು ತಿಳಿಸಿದ್ದಾರೆ.