ರಾಯ್ ಬರೇಲಿ, ಜ 01 (DaijiworldNews/MS): ಕಾಂಗ್ರೆಸ್ ಭದ್ರಕೋಟೆ ರಾಯ್ ಬರೇಲಿಯಲ್ಲಿ ಪ್ರತಿಪಕ್ಷದ ವಿರುದ್ದ ವಾಗ್ದಾಳಿ ನಡೆಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ’ಅರಾಜಕತೆ ಮತ್ತು ಭ್ರಷ್ಟಾಚಾರದ ಮೂಲವಾಗಿರುವ ಕಾಂಗ್ರೆಸ್ ಪಕ್ಷವು ದೇಶದ ಒಂದು ದೊಡ್ಡ ಸಮಸ್ಯೆ ಎಂದು ಹೇಳಿದ್ದಾರೆ.
2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಆಡಳಿತಾರೂಢ ಬಿಜೆಪಿಯ 'ಜನ ವಿಶ್ವಾಸ ಯಾತ್ರೆ'ಯ ಭಾಗವಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಆದಿತ್ಯನಾಥ್, ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಯ್ಬರೇಲಿ ಶ್ರೀಮತಿ ಸೋನಿಯಾ ಗಾಂಧಿಯವರ ಲೋಕಸಭಾ ಕ್ಷೇತ್ರವಾಗಿದೆ. " ರಾಯ್ಬರೇಲಿ ಎಂದಿಗೂ ವಿದೇಶಿ ಆಡಳಿತವನ್ನು ಒಪ್ಪಿಕೊಂಡಿಲ್ಲ, ದೇಶದಲ್ಲಿ ಭಯೋತ್ಪಾದನೆ, ಅರಾಜಕತೆ ಮತ್ತು ಭ್ರಷ್ಟಾಚಾರದ ಮೂಲವಾಗಿರುವ ಕಾಂಗ್ರೆಸ್, ಜಾತಿವಾದ ಮತ್ತು ಭಾಷಾಭೇದವನ್ನು ಹರಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಎಸ್ಪಿ ಮತ್ತು ಬಹುಜನ ಸಮಾಜ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಆದಿತ್ಯನಾಥ್, ಎಸ್ಪಿ ಮತ್ತು ಬಿಎಸ್ಪಿ ಪಕ್ಷಗಳೂ ರಾಜ್ಯಕ್ಕೆ ಸಮಸ್ಯೆಯಾಗಿದೆ. ಇಂದು ಎಸ್ಪಿ ಧ್ವಜವಿರುವ ವಾಹನ ಎಂದರೆ ಯಾರೋ ಗೂಂಡಾಗಳು ಒಳಗೆ ಕುಳಿತಿದ್ದಾರೆ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ.
ನಮ್ಮ ಸರ್ಕಾರ ಜನರಿಗಾಗಿ ಕೆಲಸ ಮಾಡುತ್ತದೆ ಮತ್ತು ನಂಬಿಕೆಯನ್ನು ಗೌರವಿಸುತ್ತದೆ. ಕಾಂಗ್ರೆಸ್, ಎಸ್ಪಿ ಮತ್ತು ಬಿಎಸ್ಪಿ ಬಿಜೆಪಿಯ ರೀತಿಯಲ್ಲಿ ಕೆಲಸ ಮಾಡಬಹುದೇ? ರಾಮ ಮತ್ತು ಕೃಷ್ಣನನ್ನು ಕಾಲ್ಪನಿಕತೆ ಎಂದು ಹೇಳಿದವರು ಮಂದಿರವನ್ನು ಕಟ್ಟಬಹುದೇ? ಭಗವಾನ್ ರಾಮನ ಭಕ್ತರ ಮೇಲೆ ಗುಂಡು ಹಾರಿಸುವವರು ದೇವಾಲಯ ನಿರ್ಮಿಸಬಹುದೇ? ಎಂದು ಪ್ರಶ್ನಿಸಿದರು.