ಬೆಂಗಳೂರು, ಜ.01 (DaijiworldNews/PY): "ಮೇಕೆದಾಟು ಬಗ್ಗೆ ಹೊಣೆಗೇಡಿತಕ್ಕೆ ಸಾಕ್ಷ್ಯ ನಮ್ಮಲ್ಲಿದೆ. ಕಾದು ನೋಡಿ. ಕೆಲವೇ ದಿನಗಳಲ್ಲಿ ಸ್ಪೋಟಕ ಮಾಹಿತಿ ಹೊರ ಹಾಕುತ್ತೇವೆ" ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇದೆಲ್ಲ ರಾಜ್ಯದ ಹಿತದೃಷ್ಟಿಯಿಂದ ಹಾಗೂ ರಾಜ್ಯದ ಜನತೆಗೆ ಸತ್ಯ ಗಮನಕ್ಕೆ ತರುವುದಕ್ಕಾಗಿ" ಎಂದಿದ್ದಾರೆ.
"ಅಂದು ಕೃಷ್ಣೆಗೆ, ಇಂದು ಕಾವೇರಿಗೆ ಸಿಕ್ಕ ಅವಕಾಶವನ್ನು ವ್ಯರ್ಥಗೊಳಿಸಿ ಅರ್ಥಹೀನವಾದ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ಮಿತ್ರರು ಅಧಿಕಾರದಲ್ಲಿದ್ದಾಗ ಮೇಕೆದಾಟು ಬಗ್ಗೆ ಹೊಣೆಗೇಡಿತಕ್ಕೆ ಸಾಕ್ಷ್ಯ ನಮ್ಮಲ್ಲಿದೆ. ಕಾದು ನೋಡಿ. ಕೆಲವೇ ದಿನಗಳಲ್ಲಿ ಸ್ಪೋಟಕ ಮಾಹಿತಿ ಹೊರ ಹಾಕುತ್ತೇವೆ" ಎಂದು ಹೇಳಿದ್ದಾರೆ.
"ಕೈ ನಾಯಕರು ಪಾದಯಾತ್ರೆ ಮಾಡುತ್ತಿರುವುದು ಹಾಗೂ ಗಿಮಿಕ್ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಪಾದಯಾತ್ರೆ ಮಾಡಿ, ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ರಾಜಕೀಯ ಗಿಮಿಕ್ ಮಾಡಿದ್ದರು" ಎಂದು ತಿಳಿಸಿದ್ದಾರೆ.
"ಅಧಿಕಾರದಲ್ಲಿದ್ದಾಗ ಆಲಸ್ಯತನ ತೋರುವುದು, ಅನಗತ್ಯವಾದ ಆಂದೋಲನಗಳನ್ನು ಕೈಗೊಳ್ಳುವುದು ಕಾಂಗ್ರೆಸ್ಸಿಗರ ಜಾಯಮಾನ. ಅಧಿಕಾರದಲ್ಲಿದ್ದಾಗ ಕಾವೇರಿ ಕಣಿವೆಯ ರೈತರ ಹಾಗೂ ಜನಹಿತದ ಕಾರ್ಯಗಳನ್ನು ವಿಳಂಬ ಮಾಡುವ ಮೂಲಕ ಮುಂದೂಡಿ ಈಗ ಪಾದಯಾತ್ರೆಯ ಮೂಲಕ ಗಿಮಿಕ್ ಮಾಡುವುದು ಜನರಿಗೆ ತಿಳಿಯುತ್ತದೆ" ಎಂದಿದ್ದಾರೆ.