ಬೆಂಗಳೂರು, ಜ.01 (DaijiworldNews/PY): ಕಾಂಗ್ರೆಸ್ ಪಾದಯಾತ್ರೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಆರ್ ಅಶೋಕ್ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿರುಗೇಟು ನೀಡಿದ್ದು, "ಅಶೋಕಣ್ಣಗೆ ಬೆಂಗಳೂರು ನಗರದ ಕುರಿತು ಕಾಳಜಿ ಇಲ್ಲ. ಕಾಳಜಿ ಇದ್ದಿದ್ದರೆ ಅವರು ಈ ರೀತಿಯಾಗಿ ಮಾತನಾಡುತ್ತಿರಲಿಲ್ಲ" ಎಂದು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾವು ಮೇಕೆ ಮಾಂಸ ತಿನ್ನಲು ಪಾದಯಾತ್ರೆ ಮಾಡುತ್ತಿಲ್ಲ. ಕುಡಿಯುವ ನೀರಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಇದು ಕೇವಲ ಕಾಂಗ್ರೆಸ್ನವರ ಹೋರಾಟವಲ್ಲಿ. ಈ ಹೋರಾಟದಲ್ಲಿ ಪಕ್ಷಾತೀತವಾಗಿ ಭಾಗವಹಿಸಬಹುದು" ಎಂದಿದ್ದಾರೆ.
"ಬೆಂಗಳೂರಿನ ಬಗ್ಗೆ ಅಶೋಕ್ ಅವರಿಗೆ ಕಾಳಜಿ ಇಲ್ಲ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಸಂದರ್ಭ ಮೇಕೆದಾಟು ಯೋಜನೆಗೆ ಡಿಪಿಆರ್ ಕಳುಹಿಸಲಾಗಿತ್ತು. ಮೇಕೆದಾಟು ಪಾದಯಾತ್ರೆಯಲ್ಲಿ ಎಲ್ಲರೂ ಭಾಗವಹಿಸುವ ಮೂಲಕ ಯೋಜನೆಗೆ ಒತ್ತಾಯಿಸಬೇಕಿದೆ" ಎಂದು ಹೇಳಿದ್ದಾರೆ.
"ನನ್ನಲ್ಲಿ ಹೋರಾಟದ ಒಂದು ಸಣ್ಣ ಗುಣವಿದೆ ಎಂದೇ ಅಂದು ನನ್ನನ್ನು ದೇವೇಗೌಡರ ಎದುರು ಚುನಾವಣೆಗೆ ನಿಲ್ಲಿಸಿದ್ದು. ಅಂದು ನಾನು ಚುನಾವಣೆಯಲ್ಲಿ ಸೋತಿರಬಹುದು. ಈವರೆಗೆ ನಾನು ಬಂದಿದ್ದು ಹೋರಾಟದ ಮೂಲಕವೇ" ಎಂದಿದ್ಧಾರೆ.