ಮಹಾರಾಷ್ಟ್ರ, ಜ.01 (DaijiworldNews/PY): "ಮಹಾರಾಷ್ಟ್ರ ಸರ್ಕಾರದ 10 ಸಚಿವರು ಹಾಗೂ 20ಕ್ಕೂ ಅಧಿಕ ಶಾಸಕರಿಗೆ ಕೊರೊನಾ ತಗುಲಿದೆ" ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ ಶನಿವಾರ ಮಾಹಿತಿ ನೀಡಿದ್ದಾರೆ.
"ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಏರಿಕೆ ಹೀಗೆ ಮುಂದುವರಿದಲ್ಲಿ ಕಠಿಣ ನಿರ್ಬಂಧ ಕ್ರಮಗಳನ್ನು ಜಾರಿಗೆ ತರಬೇಕಾಗುತ್ತದೆ" ಎಂದಿದ್ದಾರೆ.
ಅಧಿವೇಶನದಲ್ಲಿ ಇವರೆಲ್ಲಾ ಭಾಗಿಯಾಗಿದ್ದರಿಂದ ಕೊರೊನಾ ಹರಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇಷ್ಟೇ ಅಲ್ಲದೇ, ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನದ ಸಂದರ್ಭ ನಿಯೋಜಿಸಲಾದ 35 ಪೊಲೀಸರು ಹಾಗೂ ಸರ್ಕಾರಿ ನಭಕರರಿಗೆ ಕೊರೊನಾ ದೃಢಪಟ್ಟಿದೆ.
"ವಿಧಾನಸಭೆ ಅಧಿವೇಶನವನ್ನು ನಾವು ಇತ್ತೀಚೆಗೆ ಮೊಟಕುಗೊಳಿಸಿದ್ದೇವೆ. ಇಲ್ಲಿಯವರೆಗೆ 10ಕ್ಕೂ ಅಧಿಕ ಸಚಿವರು ಹಾಗೂ 20ಕ್ಕೂ ಅಧಿಕ ಶಾಸಕರಿಗೆ ಕೊರೊನಾ ದೃಢಪಟ್ಟಿದೆ. ಹೊಸ ತಳಿ ವೈರಸ್ ವೇಗವಾಗಿ ಹರಡುತ್ತಿದೆ ಹಾಗೂ ಈ ಕಾರಣಕ್ಕಾಗಿ ಎಚ್ಚರಿಕೆ ಅಗತ್ಯ ಎನ್ನುವುದನ್ನು ನೆನಪಿಟ್ಟುಕೊಳ್ಳಿ" ಎಂದು ಅಜಿತ್ ಪವಾರ್ ತಿಳಿಸಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರು ಕಟ್ಟೆಚ್ಚರ ವಹಿಸುವಂತೆ ಮನವಿ ಮಾಡಿದ್ದಾರೆ. ಕೆಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ಕೂಡಾ ಜಾರಿಗೆ ಬಂದಿದೆ. ಮಹಾರಾಷ್ಟ್ರ, ಮುಂಬೈ ಹಾಗೂ ಪುಣೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿವೆ" ಎಂದಿದ್ದಾರೆ.