ನವದೆಹಲಿ,ಜ 01 (DaijiworldNews/MS): ಹೊಸ ವರ್ಷದಂದು ನ್ಯಾಷನಲ್ ಆಯಿಲ್ ಮಾರ್ಕೆಟಿಂಗ್ ಕಂಪನಿ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದ್ದು, 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ಗಳ ಬೆಲೆಯಲ್ಲಿ 102.50 ರೂಪಾಯಿ ಕಡಿತಗೊಳಿಸಿವೆ. ಇಂದಿನಿಂದ ಈ ಪರಿಷ್ಕೃತ ದರ ಜಾರಿಗೆ ಬಂದಿದೆ. ವಾಣಿಜ್ಯ ಸಿಲಿಂಡರ್ಗಳ ಬೆಲೆ ಇಳಿಕೆಯಿಂದ ಟೀ ಸ್ಟಾಲ್ಗಳು ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರಿಗೆ ನಿಟ್ಟುಸಿರು ಬಿಡುವಂತೆ ಆಗಿದೆ.
ಇಂಡಿಯನ್ ಆಯಿಲ್ ಪ್ರಕಾರ, ಜನವರಿ 1, 2022 ರಂದು, ದೆಹಲಿಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನು 102 ರೂ. ಕಡಿತಗೊಳಿಸಲಾಗಿದೆ. ಇದರಂತೆ ದೆಹಲಿಯಲ್ಲಿ 19 ಕೆಜಿಯ ಸಿಲಿಂಡರ್ ರೂ. 1998ಗೆ ದೊರೆಯಲಿದೆ. ಡಿಸೆಂಬರ್ 1ರಂದು 19 ಕೆಜಿ ಕಮರ್ಷಿಯಲ್ ಸಿಲಿಂಡರ್ಗಳ ಬೆಲೆಯಲ್ಲಿ 100 ರೂಪಾಯಿ ಏರಿಕೆ ಮಾಡಲಾಗಿತ್ತು.
ವಾಣಿಜ್ಯ ಬಳಕೆಯ ಸಿಲಿಂಡರ್ ಗಳ ಬೆಲೆ ಇಳಿಕೆ ಮಾಡಿರುವ ಇಂಡಿಯನ್ ಆಯಿಲ್, ಗೃಹ ಬಳಕೆಯ ಸಿಲಿಂಡರ್ ಗಳ ಬೆಲೆಯಲ್ಲಿ ಯಾವುದೇ ಇಳಿಕೆಯನ್ನೂ ಮಾಡಿಲ್ಲ. ಮಾತ್ರವಲ್ಲದೆ 14.2 ಕೆಜಿ, 5 ಕೆಜಿ, 10 ಕೆಜಿ ಕಂಪೋಸಿಟ್ ಅಥವಾ 5 ಕೆಜಿ ಕಂಪೋಸಿಟ್ ದೇಶಿ ಸಿಲಿಂಡರ್ಗಳ ಬೆಲೆಯಲ್ಲಿ ಇಳಿಕೆಯಾಗಿಲ್ಲ.