ಕತ್ರಾ, ಜ 01 (DaijiworldNews/MS): ಕೆಲವು ಯುವಕರ ನಡುವಿನ ಕ್ಷುಲಕ ಜಗಳವೇ ಮಾತಾ ವೈಷ್ಣೋ ದೇವಿ ದೇಗುಲದಲ್ಲಿ ನಡೆದ ಕಾಲ್ತುಳಿತಕ್ಕೆ ಪ್ರಮುಖ ಕಾರಣ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಶನಿವಾರ ತಿಳಿಸಿದ್ದಾರೆ.
ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಘಟನೆ ಅತ್ಯಂತ ದುರದೃಷ್ಟಕರ. ಪೊಲೀಸರು ಮತ್ತು ಇತರ ಅಧಿಕಾರಿಗಳು ಸ್ವಲ್ಪ ಸಮಯದಲ್ಲೇ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಘಟನಾ ಸ್ಥಳದ ಪ್ರಾಥಮಿಕ ಮಾಹಿತಿ ಪ್ರಕಾರ, ಕೆಲವು ಯುವಕರ ನಡುವೆ ವಾಗ್ವಾದ ನಡೆದಿದೆ ಮತ್ತು ಕೆಲವೇ ಸೆಕೆಂಡುಗಳಲ್ಲಿ ನೂಕುನುಗ್ಗಲು ಉಂಟಾಗಿದೆ ತಕ್ಷಣ ಪೊಲೀಸರು ಮತ್ತು ಸ್ಥಳೀಯ ಆಡಳಿತದ ಅಧಿಕಾರಿಗಳು ಶೀಘ್ರವಾಗಿ ಸ್ಪಂದಿಸಿದ್ದಾರೆ. ಕೂಡಲೇ ಪರಿಸ್ಥಿತಿಯನ್ನು ತಹಬದಿಗೆ ತರಲಾಗಿದೆ. ಆದರೆ, ಆ ಹೊತ್ತಿಗಾಗಲೇ ಜೀವ ಹಾನಿ ಸಂಭವಿಸಿತ್ತುಎಂದು ಸಿಂಗ್ ತಿಳಿಸಿದ್ದಾರೆ.
ಪರಿಸ್ಥಿತಿಯನ್ನು ಅವಲೋಕಿಸಲು ಅವರು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಕತ್ರಾಗೆ ಆಗಮಿಸುತ್ತಿದ್ದು, ಈ ಸಂದರ್ಭ ಪ್ರತಿಕ್ರಿಯಿಸಿರುವ ಅವರು, ಮಧ್ಯರಾತ್ರಿ 2:30 ರ ಸುಮಾರಿಗೆ ದೇಗುಲದ ಗೇಟ್ನಲ್ಲಿ ಕೆಲವು ಯುವಕರ ನಡುವೆ ವಿಷಯದ ಬಗ್ಗೆ ಚರ್ಚಿಸುವಾಗ ವಾಗ್ವಾದ ಪ್ರಾರಂಭವಾಯಿತು ಮತ್ತು ಇದು ಗದ್ದಲಕ್ಕೆ ಕಾರಣವಾಯಿತು ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿರುವ ಪ್ರಸಿದ್ಧ ಮಾತಾ ವೈಷ್ಣೋ ದೇವಿ ದೇಗುಲದಲ್ಲಿ ಹೊಸ ವರ್ಷ ಹಿನ್ನಲೆಯಲ್ಲಿ ಬಂದಿದ್ದ ಭಕ್ತರ ನೂಕುನುಗ್ಗಲಿನಲ್ಲಿ ಸಿಲುಕಿ ಕಾಲ್ತುಳಿತದಲ್ಲಿ 12 ಜನರು ಸಾವನ್ನಪ್ಪಿದ್ದರು. ಘಟನೆಯಲ್ಲಿ ಇಪ್ಪತ್ತು ಜನರು ಗಾಯಗೊಂಡಿದ್ದು ಹೆಚ್ಚಿನವರು ಮಾತಾ ವೈಷ್ಣೋ ದೇವಿ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಗಾಯಗೊಂಡವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.