ನವದೆಹಲಿ, ಜ 01 (DaijiworldNews/MS): ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ - ಕಿಸಾನ್) ಯೋಜನೆಯಡಿ 10 ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಧ್ಯಾಹ್ನ 12:30ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಬಿಡುಗಡೆ ಮಾಡಲಿದ್ದಾರೆ.
ಪ್ರಧಾನ ಮಂತ್ರಿ ಕಾರ್ಯಾಲಯದ ಅಧಿಕೃತ ಹೇಳಿಕೆಯ ಪ್ರಕಾರ, ಇದು ಸರ್ಕಾರದ ನಿರಂತರ ಬದ್ಧತೆ ಮತ್ತು ತಳಮಟ್ಟದ ರೈತರನ್ನು ಸಬಲೀಕರಣಗೊಳಿಸುವ ಸಂಕಲ್ಪಕ್ಕೆ ಅನುಗುಣವಾಗಿದೆ.ಇದು 10 ಕೋಟಿಗೂ ಹೆಚ್ಚು ಫಲಾನುಭವಿ ರೈತ ಕುಟುಂಬಗಳಿಗೆ 20,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ವರ್ಗಾಯಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪಿಎಂ - ಕಿಸಾನ್ ಯೋಜನೆಯಡಿಯಲ್ಲಿ, ರೈತ ಕುಟುಂಬಗಳಿಗೆ ಇದುವರೆಗೆ 1.6 ಲಕ್ಷ ಕೋಟಿ ರೂ.ಪಾಯಿಗೂ ಹೆಚ್ಚು ಗೌರವ ಧನ ನೀಡಲಾಗಿದೆ. ಅರ್ಹ ಫಲಾನುಭವಿ ರೈತ ಕುಟುಂಬಗಳಿಗೆ ವರ್ಷಕ್ಕೆ 6,000 ರೂಪಾಯಿಗಳ ಆರ್ಥಿಕ ಪ್ರಯೋಜನವನ್ನು ಒದಗಿಸಲಾಗುತ್ತದೆ, ತಲಾ 2,000 ರೂಪಾಯಿಗಳ ಮೂರು ಸಮಾನ ನಾಲ್ಕು-ಮಾಸಿಕ ಕಂತುಗಳಲ್ಲಿ ಪಾವತಿಸಲಾಗುತ್ತದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಹೇಳಿದೆ.
ಪಿಎಂ-ಕಿಸಾನ್ ಯೋಜನೆಯ ನಿಧಿಯನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಇನ್ನು ಕರ್ನಾಟಕ ಸರ್ಕಾರ ಇದಕ್ಕೆ 4 ಸಾವಿರ ರೂ. ಹೆಚ್ಚುವರಿಯಾಗಿ ನೀಡುತ್ತಾ ಬಂದಿದೆ.