ಮಹಾರಾಷ್ಟ್ರ, ಜ.01 (DaijiworldNews/PY): ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿನ ಕಲ್ವಾ ಪ್ರದೇಶದಲ್ಲಿ ವ್ಯಕ್ತಿಯೋರ್ವ ಮನೆಯಿಂದ 50 ರೂ. ಕದ್ದ ಎನ್ನುವ ಕಾರಣದಿಂದ ಸ್ವಂತ ಮಗನನ್ನೇ ಥಳಿಸಿ ಹತ್ಯೆಗೈದಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಘೋಬಾ ನಗರದ ಸ್ಲಂ ಕಾಲೋನಿಯಲ್ಲಿ ಗುರುವಾರ ಸಂಜೆ ಸಂದೀಪ್ ಬಬ್ಲು ಓಂಪ್ರಕಾಶ್ ಪ್ರಜಾಪತಿ (41) ಎನ್ನುವ ವ್ಯಕ್ತಿ ತನ್ನ 10 ವರ್ಷದ ಮಗನಿಗೆ ಥಳಿಸಿದ ಕಾರಣ ಬಾಲಕ ನಿತ್ರಾಣವಾಗಿ ನೆಲದ ಮೇಲೆ ಬಿದ್ದಿದ್ದನು. ಈ ಕುರಿತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಘಟನೆಯ ಬಗ್ಗೆ ಮಾಹಿತಿ ದೊರೆತ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡವೊಂದು ಬಾಲಕನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದೆ. ಆದರೆ, ಬಾಲಕ ಆ ವೇಳೆಗಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದ್ದಾರೆ.
ಮನೆಯಿಂದ 50 ರೂ. ಕದ್ದ ಎನ್ನುವ ಕಾರಣಕ್ಕೆ ತಂದೆಯೇ ಹೊಡೆದಿರುವುದಾಗಿ ಬಾಲಕನ ಅಕ್ಕ ಪೊಲೀಸರಿಗೆ ಮಾಹಿತಿ ನೀಡಿದ್ಧಾರೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾಪತಿಯ ವಿರುದ್ದ ಕೊಲೆ ಪ್ರಕರಣ ದಾಖಲಾಗಿದೆ. ಮೃತ ಬಾಲಕನ ತಾಯಿಯ ವಿಚಾರಣೆ ನಡೆಯುತ್ತಿದೆ ಎಂದು ಕಲ್ವಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.