ಬೆಂಗಳೂರು, ಡಿ.31 (DaijiworldNews/PY): ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವ ವಿಚಾರ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದ್ದು, ಈ ವಿಚಾರವನ್ನು ಮುಂದಿಟ್ಟುಕೊಂಡು ಕೈ ನಾಯಕರು ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸುತ್ತಿದ್ಧಾರೆ.
ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಟ್ವೀಟ್ ಮಾಡಿದ್ದು, "ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿ ದೇಗುಲಗಳಿಂದ ಸರ್ಕಾರದ ಖಜಾನೆಗೆ ಸಾಕಷ್ಟು ಆದಾಯ ಬರುತ್ತಿದೆ. ಕೋವಿಡ್ ಪರಿಸ್ಥಿತಿಯಿಂದಾಗಿ ರಾಜ್ಯದ ಬೊಕ್ಕಸ ಖಾಲಿಯಾಗುತ್ತಿದೆ. ಇಂತಹ ಸಮಯದಲ್ಲಿ ಆದಾಯ ತರುತ್ತಿರುವ ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಿ ಖಾಸಗಿಯವರಿಗೆ ಕೊಡುವುದೆಂದರೆ ಗಾಯದ ಮೇಲೆ ಬರೆ ಎಳೆದಂತೆ" ಎಂದಿದ್ದಾರೆ.
"ದೇಗುಲಗಳೇ ಆಗಲಿ, ಸಂಸ್ಥೆಗಳೇ ಆಗಲಿ ಸರ್ಕಾರದ ಸುಪರ್ದಿಯಲ್ಲಿರುವವರೆಗೆ ಅದು ಸಾರ್ವಜನಿಕರ ಆಸ್ತಿ.ಖಾಸಗಿಯವರಿಗೆ ಸೇರಿದ ನಂತರ ಅದರ ಮೇಲೆ ಸರ್ಕಾರಕ್ಕೆ ನಿಯಂತ್ರಣ ಇರುವುದಿಲ್ಲ. ಸರ್ಕಾರಕ್ಕೆ ನಿಜವಾಗಿಯೂ ಬದ್ಧತೆ ಇದ್ದರೆ, ದೇಗುಲಗಳನ್ನು ತನ್ನ ನಿಯಂತ್ರಣದಲ್ಲೇ ಇಟ್ಟುಕೊಂಡು ಸಮಾಜದ ಎಲ್ಲ ವರ್ಗದವರನ್ನೂ ದೇಗುಲದ ಸಿಬ್ಬಂದಿಯನ್ನಾಗಿ ನೇಮಿಸಲಿ" ಎಂದು ಆಗ್ರಹಿಸಿದ್ಧಾರೆ.
ಈ ವಿಚಾರದ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, "ಡಿಕೆಶಿ ಅವರಿಗೆ ತಿರುಗೇಟು ನೀಡಿದ್ದು, ಕಾಂಗ್ರೆಸ್ ನಾಯಕ, ಕೊತ್ವಾಲ್ ಶಿಷ್ಯ: ದೇಗುಲಗಳನ್ನು ಸರ್ಕಾರಿ ಸಾಮ್ಯದಿಂದ ಹಿಂದೂಗಳಿಗೆ ವಾಪಸು ನೀಡುವುದಕ್ಕೆ ವಿರೋಧ... ಗೋಹತ್ಯಾ ನಿಷೇಧಕ್ಕೆ ವಿರೋಧ... ಮತಾಂತರ ನಿಷೇಧ ಕಾಯಿದೆಗೆ ವಿರೋಧ.... ರಾಮ ಮಂದಿರ ಪುನರ್ನಿರ್ಮಾಣಕ್ಕೆ ವಿರೋಧ.. ಸಿಎಎಗೆ ವಿರೋಧ... ಹಿಂದೂಗಳ ಪರವಾದ ಯಾವುದೇ ವಿಚಾರವಿದ್ದರೂ ಪ್ರತಿಬಾರಿಯೂ ಈತನ ವಿರೋಧ ಇದ್ದದ್ದೆ. ಈತ ಹಿಂದೂ ಹೌದ ಅಲ್ಲವಾ ಅನ್ನೋದರ ಬಗೆಗೆ ಸಂಶಯ ಬರೋದು ಸಹಜ ತಾನೇ?" ಎಂದು ಪ್ರಶ್ನಿಸಿದ್ದಾರೆ.