ಬೆಂಗಳೂರು, ಡಿ. 31 (DaijiworldNews/HR): ರಾಜ್ಯದಲ್ಲಿನ ದೇವಸ್ಥಾನಗಳನ್ನು ತಮ್ಮ ಪಕ್ಷದ ಕಾರ್ಯಕರ್ತರು ಮತ್ತು ಪರಿವಾರದ ಮುಖಂಡರಿಗೆ ನೀಡುವ ಪ್ರಯತ್ನದ ಮೂಲಕ ಬಿಜೆಪಿ ಸರ್ಕಾರವು ಹಿಂದೂ ವಿರೋಧಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಂಘ ಪರಿವಾರದ ಮುಖಂಡರ ಶಿಕ್ಷಣ ಸಂಸ್ಥೆಗಳಿಗೆ ಈ ಮೊದಲು ಕೋಟ್ಯಂತರ ರೂ. ಬೆಲೆ ಬಾಳುವ ಜಮೀನುಗಳನ್ನು ನೀಡಲಾಗಿತ್ತು. ಈಗ ದೇವಸ್ಥಾನಗಳನ್ನು ಮಾರಾಟ ಮಾಡುವ ಕ್ರೂರ ಕೃತ್ಯಕ್ಕೆ ಬಿಜೆಪಿ ಸರ್ಕಾರ ಕೈ ಹಾಕಿದ್ದು, ಇದಕ್ಕೆ ಕಾಂಗ್ರೆಸ್ ಅವಕಾಶ ನೀಡುವುದಿಲ್ಲ" ಎಂದಿದ್ದಾರೆ.
ಇನ್ನು ಕರ್ನಾಟಕದ ಕೆಲವು ದೇವಸ್ಥಾನಗಳನ್ನು ಹೊರತುಪಡಿಸಿದರೆ ಬಹುತೇಕ ಮುಜರಾಯಿ ಇಲಾಖೆಯ ಅಧೀನದಲ್ಲಿದ್ದು, ಸರ್ಕಾರದ ಹಿರಿಯ ಅಧಿಕಾರಿಗಳು ಇದರ ಆಡಳಿತ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಈಗ ಆ ದೇವಸ್ಥಾನಗಳನ್ನು ತಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಸಂಘ ಪರಿವಾರದ ಮುಖಂಡರಿಗೆ ನೀಡಲು ಸರ್ಕಾರ ಕಾನೂನು ತಿದ್ದುಪಡಿ ಮಾಡಲು ಮುಂದಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.