ಬೆಂಗಳೂರು, ಡಿ.31 (DaijiworldNews/PY): ಬೆಳೆಹಾನಿ ಪರಿಹಾರ ನೀಡುವಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲು ಮುಂದಾಗದೇ ಮೀನಾಮೇಷ ಎಣಿಸುತ್ತಿರುವ ಕೆಲ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, "ಬಾಸಿಸಂ ಬಿಟ್ಟು ವಿವೇಚನೆಯಿಂದ ಕೆಲಸ ಮಾಡಿ" ಎಂದಿದ್ದಾರೆ.
ವಿಧಾನಸೌಧದಲ್ಲಿ ನಡೆಸ ಡಿಸಿಗಳ ಸಭೆಯಲ್ಲಿ ಮಾತನಾಡಿದ ಅವರು, "ಅಧಿಕಾರ ಚಲಾಯಿಸುವುದು ಮಾತ್ರವೇ ಕೆಲಸವಲ್ಲ. ಪ್ರಾಮಾಣಿಕವಾಗಿ ಜನರ ಸಂಕಷ್ಟಕ್ಕೆ ಸ್ಪಂದಿಸಿ, ತಕ್ಷಣ ಅವರ ಸಮಸ್ಯೆಗಳನ್ನು ನಿವಾರಿಸುವುದು ಕೆಲಸ. ಅಧಿಕಾರಿಗಳು ದರ್ಪ ಬಿಟ್ಟು ಕಾರ್ಯನಿರ್ವಹಿಸಬೇಕು" ಎಂದು ಹೇಳಿದ್ದಾರೆ.
"ಅಧಿಕಾರಿಗಳ ಬೇಜವಾಬ್ದಾರಿಯ ಕಾರ್ಯ ನಿರ್ವಹಣೆಯಿಂದ ಸರ್ಕಾರಕ್ಕೂ ಕೆಟ್ಟ ಹೆಸರು. ಆ ರೀತಿಯ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಲಾಗುತ್ತದೆ" ಎಂದು ವಾರ್ನಿಂಗ್ ನೀಡಿದ್ಧಾರೆ.
"ಕೆಲವು ಜಿಲ್ಲೆಗಳಲ್ಲಿ ಇನ್ನೂ ಬೆಳೆಹಾನಿ ಪರಿಹಾರ ವಿತರಣೆಯಾಗಿಲ್ಲ. ಪರಿಹಾರ ಆಪ್ನಲ್ಲಿ ಅಪ್ಲೋಡ್ ಮಾಡಿದ 48 ಗಂಟೆಗಳ ಒಳಗಾಗಿ ಪರಿಹಾರ ನೀಡಬೇಕು. ಜನಸಾಮಾನ್ಯರಿಗೂ ಯೋಜನೆಗಳು ತಲುಪಬೇಕು ಈ ಸಲುವಾಗಿ ಕೆಲಸ ಮಾಡಬೇಕು. ವಿನಯತೆ ಹಾಗೂ ಎಚ್ಚರಿಕೆಯಿಂದ ಕೆಲಸ ಮಾಡಬೇಕು" ಎಂದಿದ್ದಾರೆ.