ತುಮಕೂರು, ಡಿ.31 (DaijiworldNews/PY): "ನಾನು ನೀರಾವರಿ ವಿಚಾರದಲ್ಲಿ ರಾಜಕಾರಣ ಮಾಡುತ್ತಿಲ್ಲ. ನಾನು ಆ ರೀತಿಯಾದ ಕೀಳು ಮಟ್ಟದ ರಾಜಕಾರಣ ಮಾಡುವ ವ್ಯಕ್ತಿಯಲ್ಲ. ಪಾಪ, ಪುಣ್ಯದ ಬಗ್ಗೆ ತಿಳಿದಿರುವವರು ಯೋಚನೆ ಮಾಡಲಿ" ಎನ್ನುತ್ತಾ ಸಚವ ಮಾಧುಸ್ವಾಮಿ ವೇದಿಕೆಯಲ್ಲೇ ಕಣ್ಣೀರಿಟ್ಟಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಸಮೀಪದ ತಿಮ್ಲಾಪುರ ಕೆರೆ ತುಂಬಿದ ಹಿನ್ನೆಲೆ ಆಯೋಜಿಸಿದ್ದ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಚಿಕ್ಕನಾಯಕನಹಳ್ಳಿ ತಾಲೂಕಿಗೆ ನೀರಾವರಿ ವಿಚಾರದಲ್ಲಿ ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೆಲವರು ಆರೋಪಿಸಿದ್ದರು. ಮಾಧುಸ್ವಾಮಿ ಅವರು ಲಿಂಗಾಯತರಿಗೆ ಮಾತ್ರವೇ ಸೀಮಿತವಾಗಿದ್ದಾರೆ ಎಂದಿದ್ದರು. ಈಗ ಆ ಪುಣ್ಯಾತ್ಮರು ಕಾಣುತ್ತಿಲ್ಲ. ಇಂದು ನನ್ನ ಕೆಲಸ ನೋಡಿ ಏನು ಹೇಳುತ್ತಾರೆ?" ಎಂದು ಪ್ರಶ್ನಿಸಿದ್ದಾರೆ.
"ತಿಮ್ಲಾಪುರ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಮಾತ್ರವೇ ಹಿಂದುಳಿದವರ ಜಮೀನು ಇದೆ. ಉಳಿದೆಡೆ ಮೇಲ್ವರ್ಗದವರ ಜಮೀನಿದೆ. ಹಾಗಾಗಿ ಹಿಂದುಳಿದವರಿಗೆ ನೆರವಾಗಲು ತಿಮ್ಲಾಪುರ ಕೆರೆಗೆ ಹೇಮಾವತಿ ನೀರು ಹರಿಸಲು ಹಠ ನಾನು ಮಾಡಿದ್ದೆ. ಈ ವರ್ಷ ತಿಮ್ಲಾಪುರ ಕೆರೆ ತುಂಬಿಸಿದ್ದೇನೆ. ಪಾಪ, ಪುಣ್ಯ ಗೊತ್ತಿರುವವರು ನಾನು ಜಾತಿವಾದಿಯೇ ಎಂದು ಯೋಚಿಸಲಿ" ಎಂದು ಭಾವುಕರಾಗಿದ್ದಾರೆ.