ನವದೆಹಲಿ, ಡಿ.31 (DaijiworldNews/PY): "ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥನೆ ಮಾಡುವುದು ಸರಿಯಾದುದಲ್ಲ. ನಮಾಜ್ ಮಾಡುವುದು ಬಲ ಪ್ರದರ್ಶನ ಆಗಬಾರದು" ಎಂದು ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ತಿಳಿಸಿದ್ದಾರೆ.
ಗುರುಗ್ರಾಮದ ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲೀಮರು ಪ್ರಾರ್ಥನೆ ಮಾಡುವುಕ್ಕೆ ಹಿಂದೂ ಸಂಘಟನೆಗಳು ಅಡ್ಡಿಪಡಿಸಿರುವ ವಿಚಾರ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಈ ಹೇಳಿಕೆ ನೀಡಿದ್ದಾರೆ.
"ಎಲ್ಲ ಮಂದಿ ಪೂಜೆ ಸಲ್ಲಿಸಲು ಹಾಗೂ ಪ್ರಾರ್ಥನೆ ಮಾಡಲು ಸ್ವತಂತ್ರರು. ಆದರೆ, ಅದು ನಿರ್ದಿಷ್ಟ ಸ್ಥಳದಲ್ಲಿಯೇ ನಡೆಯಬೇಕು. ಆ ಕುರಿತು ಯಾವುದೇ ರೀತಿಯಾದ ತಾರತಮ್ಯ ಎದುರಾದಲ್ಲಿ, ಬೇರೆ ಧರ್ಮಗಳಲ್ಲಿ ನಂಬಿಕೆ ಇಟ್ಟಿರುವ ಜನರು ಸ್ಥಳೀಯ ಆಡಳಿತವನ್ನು ಮಧ್ಯ ಪ್ರವೇಶಿಸುವಂತೆ ಕೋರಬಹುದು" ಎಂದಿದ್ದಾರೆ.
ಪಟೌದಿಯಲ್ಲಿ ಕೆಲ ಬಲಪಂಥೀಯ ಯುವಕರು ಕ್ರಿಸ್ಮಸ್ ಆಚರಣೆಗೆ ಅಡ್ಡಿಪಡಿಸಿದ್ದರ ಕುರಿತು ಪ್ರತಿಕ್ರಿಯೆ ನೀಡಿದ ಅವರು, "ಅದೊಂದು ದುರದೃಷ್ಟಕರ ಘಟನೆಯಾಗಿದೆ. ಆ ರೀತಿಯಾದ ಘಟನೆಗಳನ್ನುಬೆಂಬಲಿಸುವ ಯಾವುದೇ ಕಾರಣಗಳಿಲ್ಲ" ಎಂದು ತಿಳಿಸಿದ್ದಾರೆ.