ಬೆಂಗಳೂರು, ಡಿ. 31 (DaijiworldNews/HR): ಕೋಟದಲ್ಲಿ ಕೊರಗ ಸಮುದಾಯದವರ ಮೇಲೆ ಪೊಲೀಸರು ಜಾಮೀನು ರಹಿತ ಪ್ರಕರಣವನ್ನು ದಾಖಲಿಸಿರುವುದು ಮೇಲ್ನೋಟಕ್ಕೆ ಅತ್ಯಂತ ಸುಳ್ಳು ಪ್ರಕರಣ ಎಂದು ಕಾಂಗ್ರೆಸ್ ಹಿರಿಯ ನಾಯಕ ಡಾ.ಹೆಚ್.ಸಿ. ಮಹಾದೇವಪ್ಪ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಕೊರಗರ ಮೇಲೆ ಹಲ್ಲೆ ನಡೆಸಿದ ಪೊಲೀಸರ ಮೇಲೆ ಕ್ರಮ ಕೈಗೊಳ್ಳುವುದಾಗಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಹೇಳಿದ್ದರು. ಆದರೆ ಅಚ್ಚರಿ ಎಂಬಂತೆ ಯಾವ ಕೊರಗರ ಮೇಲೆ ಹಲ್ಲೆ ನಡೆಸಲಾಗಿತ್ತೋ ಇದೀಗ ಅವರ ಮೇಲೆಯೇ ಪೊಲೀಸರು ಜಾಮೀನು ರಹಿತ ಪ್ರಕರಣವನ್ನು ದಾಖಲಿಸಿದ್ದು ಇದು ಮೇಲ್ನೋಟಕ್ಕೆ ಅತ್ಯಂತ ಸುಳ್ಳು ಪ್ರಕರಣವೇ ಆಗಿದೆ" ಎಂದಿದ್ದಾರೆ.
ಇನ್ನು "ಪೊಲೀಸರು ಹಲ್ಲೆ ನಡೆದ ದಿನವೇ ತಮ್ಮ ಮೇಲಾದ ದಾಳಿಯ ಸುದ್ದಿಯ ಬಗ್ಗೆ ತಿಳಿಸಿದೇ ವಿಷಯವು ಸ್ವಲ್ಪ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಪೊಲೀಸರು ಮೂಲ ವಿಷಯವನ್ನು ತಿರುಚುವಂತೆ ಬಹು ತಡವಾಗಿ ಪ್ರತಿಕ್ರಿಯೆ ನೀಡಿ ಕೇಸು ದಾಖಲಿಸಿರುವುದು ಕೊರಗರ ಮೇಲಿನ ಸರ್ಕಾರಿ ಪ್ರಾಯೋಜಿತ ದಾಳಿಯಾಗಿದೆ ಎಂಬುದು ಅತ್ಯಂತ ಸ್ಪಷ್ಟವಾಗಿದೆ" ಎಂದರು.
"ಒಂದು ವೇಳೆ ಪೊಲೀಸರ ಮೇಲೆ ಕೊರಗರು ಹಲ್ಲೆ ನಡೆಸಿದ್ದೇ ನಿಜವಾದರೆ, ಈ ಸಂಗತಿಯನ್ನು ಪೊಲೀಸರು ಅಂದೇ ಏಕೆ ತಿಳಿಸಲಿಲ್ಲ? ಮತ್ತು ಯಾವ ಕಾರಣಕ್ಕೆ ಸಚಿವರ ಹೇಳಿಕೆಗಳು ಪ್ರಕಟಗೊಂಡ ಮೇಲೆ ಈ ರೀತಿ ಹೇಳಿಕೆ ನೀಡಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಇನ್ನು "ಈ ಕುರಿತು ಸರಿಯಾದ ಸ್ಪಷ್ಟತೆ ಇಲ್ಲದೇ ಇರುವುದು ಇಲ್ಲಿನ ಅನುಮಾನಗಳಿಗೆ ಮೂಲ ಕಾರಣ. ಈ ಸುಳ್ಳು ಪ್ರಕರಣದಲ್ಲಿ ಎಲ್ಲಾ ಜನರು ಕೊರಗರ ಪರವಾಗಿ ನಿಲ್ಲಲು ಕೋರುತ್ತೇನೆ. ಇನ್ನು ಹಲ್ಲೆ ಯಾರ ಮೇಲೆ ನಡೆದಿದ್ದರೂ ಅದು ತಪ್ಪೇ. ಆದರೆ ಇದನ್ನೇ ಸುಳ್ಳು ಬಂಡವಾಳವಾಗಿಸಿ ಪ್ರಕರಣ ದಾಖಲಿಸುವ ಅದರಲ್ಲೂ ಜಾಮೀನು ರಹಿತ ಪ್ರಕರಣ ದಾಖಲಿಸುವ ಗೃಹ ಸಚಿವರ ಕ್ರಮವು ದಲಿತರ ಮೇಲಿನ ದೌರ್ಜನ್ಯವೇ ಆಗಿದೆ!" ಎಂದು ಹೇಳಿದ್ದಾರೆ.