ಬೆಂಗಳೂರು, ಡಿ.31 (DaijiworldNews/PY): ಜೆಡಿಎಸ್ ಮುಳುಗುತ್ತಿರುವ ಹಡಗು ಎನ್ನುವವರು, ಅದೇ ಹಡಗಿನ ಹಂಗಿನಲ್ಲೇ ಅಧಿಕಾರ ಅನುಭವಿಸಿದ್ದರು. ಅದೇ ಪಕ್ಷದ ನಾಯಕರು ʼಆಪರೇಷನ್ ಹಸ್ತʼ ಮಾಡಿ ನಮ್ಮ ಮುಖಂಡರನ್ನೇ ಅಭ್ಯರ್ಥಿಗಳನ್ನಾಗಿ ಮಾಡುತ್ತಿದ್ದಾರೆ. ದಿಕ್ಕಿಲ್ಲದ 'ಅಭಯ ಹಸ್ತ'ಕ್ಕೆ ದಳದ ನಾಯಕರೇ ಗತಿ ಎಂದು ಮಾಜಿ ಸಿಎಂ ಹೆಚ್ ಡಿ ಕೆ ಟೀಕಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಬಿಡದಿ ಪುರಸಭೆ ಚುನಾವಣೆ ಫಲಿತಾಂಶ ನನ್ನ ಶಕ್ತಿ ಹೆಚ್ಚಿಸಿದೆ. ಕುಮಾರಸ್ವಾಮಿಯನ್ನು ಬಿಡದಿ ಖಾಲಿ ಮಾಡಿಸುತ್ತೇವೆ ಎನ್ನುತ್ತಿದ್ದವರಿಗೆ ಜನರೇ ಉತ್ತರ ನೀಡಿದ್ದಾರೆ. ಜನಾಶೀರ್ವಾದಕ್ಕೆ ನನ್ನ ಕೃತಜ್ಞತೆಗಳು. ಗೆಲುವು ಸಾಧಿಸಿದ ಎಲ್ಲ ಅಭ್ಯರ್ಥಿಗಳಿಗೂ ಶುಭಾಶಯಗಳು" ಎಂದು ತಿಳಿಸಿದ್ದಾರೆ.
"ಬಿಡದಿ ನನಗೆ ರಾಜಕೀಯ ಜನ್ಮಕೊಟ್ಟ ಪುಣ್ಯಭೂಮಿಯಷ್ಟೇ ಅಲ್ಲ, ನನ್ನ ಪಾಲಿನ ದೇವಭೂಮಿ. ಮುಂದಿನ 2023ರ ಚುನಾವಣೆಗೆ ಈ ಫಲಿತಾಂಶ ನನಗೆ ಮಾನಸಿಕವಾಗಿ ಶಕ್ತಿ ತುಂಬಿದೆ. ಜನರ ನಿರೀಕ್ಷೆ ಹುಸಿ ಆಗದಂತೆ ಸೇವೆ ಮಾಡುವುದು ನನ್ನ ಮತ್ತು ನಮ್ಮ ಪಕ್ಷದ ಹೊಣೆ. ಅವರ ನಿರೀಕ್ಷೆ ಎಂದೂ ಹುಸಿಯಾಗದು" ಎಂದಿದ್ದಾರೆ.
"ಬಿಡದಿಯನ್ನು ಹಿಡಿಯಲು ಕೆಲವರು ದೊಡ್ಡ ಪ್ರಮಾಣದಲ್ಲಿ ಹೊರಟಿದ್ದರು. ಕುಮಾರಸ್ವಾಮಿ ಕೇತಗಾನಹಳ್ಳಿಯ ಹಳ್ಳದಲ್ಲಿದ್ದಾನೆ, ಆತನನ್ನು ಅಲ್ಲಿಗೇ ನೂಕುತ್ತೇವೆ ಎಂದಿದ್ದರು. ಹಾಗೆ ಅಂದವರನ್ನೆ ಜನ ಹಳ್ಳಕ್ಕೆ ತಳ್ಳಿದ್ದಾರೆ. ಹಣ ಹಾಗೂ ದರ್ಪ ಸೋತಿವೆ" ಎಂದು ಹೇಳಿದ್ದಾರೆ.
ಜೆಡಿಎಸ್ ಮುಳುಗುತ್ತಿರುವ ಹಡಗು ಎನ್ನುವವರು, ಅದೇ ಹಡಗಿನ ಹಂಗಿನಲ್ಲೇ ಅಧಿಕಾರ ಅನುಭವಿಸಿದ್ದರು. ಅದೇ ಪಕ್ಷದ ನಾಯಕರು ʼಆಪರೇಷನ್ ಹಸ್ತʼ ಮಾಡಿ ನಮ್ಮ ಮುಖಂಡರನ್ನೇ ಅಭ್ಯರ್ಥಿಗಳನ್ನಾಗಿ ಮಾಡುತ್ತಿದ್ದಾರೆ. ದಿಕ್ಕಿಲ್ಲದ 'ಅಭಯ ಹಸ್ತ'ಕ್ಕೆ ದಳದ ನಾಯಕರೇ ಗತಿ. ರಾಷ್ಟ್ರೀಯ ಪಕ್ಷಕ್ಕೆ ಇದಕ್ಕಿಂತ ಕರ್ಮ ಇನ್ನೇನಿದೆ? ಎಂದು ಪ್ರಶ್ನಿಸಿದ್ಧಾರೆ.
"ಉಪ ಚುನಾವಣೆಗಳೇ ಬೇರೆ, ಸಾರ್ವತ್ರಿಕ ಚುನಾವಣೆಗಳೇ ಬೇರೆ. 2023ರಲ್ಲಿ ಜೆಡಿಎಸ್ ಏನು ಎಂದು ಜನರೇ ಉತ್ತರ ಕೊಡುತ್ತಾರೆ. ಹೆಚ್ಚೆನೂ ಸಮಯವಿಲ್ಲ. ಇನ್ನೊಬ್ಬರನ್ನು ಮುಳುಗಿಸಿ ತೇಲುವ ಹಪಾಹಪಿತನಕ್ಕೆ ಕರ್ನಾಟಕ ಕಠೋರ ಶಾಸ್ತಿ ಮಾಡಲಿದೆ" ಎಂದಿದ್ದಾರೆ.