ಬೆಂಗಳೂರು, ಡಿ. 31 (DaijiworldNews/HR): ಬಾಲಕಿಯೊಬ್ಬಳು ಆತ್ಮಗಳ ಜತೆಯಲ್ಲಿ ಮಾತನಾಡುತ್ತೇನೆ ಎಂದು ಮನೆಯಿಂದ ನಾಪತ್ತೆಯಾಗಿದ್ದು, ಇದೀಗ ಆಕೆಯನ್ನು ಪತ್ತೆ ಮಾಡಿಕೊಡುವಂತೆ ಆಕೆಯ ಪೋಷಕರು ಸಾಮಾಜಿಕ ಜಾಲತಾಣ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಅನುಷ್ಕಾ(17) ಎಂಬಾಕೆ ಅ.31ರಂದು ಮನೆಯಿಂದ ಕಾಣೆಯಾಗಿದ್ದಳು.
ಈ ಕುರಿತು ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಎರಡು ತಿಂಗಳಾದರೂ ಆಕೆಯ ಸುಳಿವು ಸಿಕ್ಕಿಲ್ಲ. ಅದರಿಂದ ಅಸಹಾಯಕರಾಗಿರುವ ಪೋಷಕರು ಇದೀಗ ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ.
ಬಾಲಕಿಯು ಎರಡು ಜತೆ ಬಟ್ಟೆ ಹಾಗೂ 2,500 ರೂ. ತೆಗೆದುಕೊಂಡು ಮನೆಬಿಟ್ಟು ಹೋಗಿದ್ದು ಇನ್ನೂ ಪತ್ತೆಯಾಗಿಲ್ಲ. ಸ್ಪಲ್ಪ ದಿನದಿಂದ ಆಕೆಯ ವರ್ತನೆಯಲ್ಲಿ ಬದಲಾವಣೆಯಾಗಿದ್ದು, ಮನೆಗೆ ಬಂದೊಡನೆಯೇ ಕೊಠಡಿಯೊಳಗೆ ಸೇರಿಕೊಂಡು ಏಕಾಂತದಲ್ಲೇ ಇರುತ್ತಿದ್ದಳು. ಯಾವ ವಿಚಾರವನ್ನೂ ನಮ್ಮೊಂದಿಗೆ ಹಂಚಿಕೊಳ್ಳುತ್ತಿರಲಿಲ್ಲ. ಇದರಿಂದ ಗಾಬರಿಗೊಂಡು ಆಕೆಯನ್ನು ಈ ವರ್ಷದ ಸೆಪ್ಟೆಂಬರ್ನಲ್ಲಿ ಮನೋವೈದ್ಯರ ಬಳಿ ಕರೆದುಕೊಂಡು ಹೋಗಿದ್ದೆವು ಎಂದು ಅನುಷ್ಕಾ ತಂದೆ ಅಭಿಷೇಕ್ ತಿಳಿಸಿದ್ದಾರೆ.
ಯುವತಿ ಪತ್ತೆಗಾಗಿ ಕಾರ್ಯಾಚರಣೆ ನಡೆಯುತ್ತಿದ್ದು, ಆಧ್ಯಾತ್ಮದ ಬಗ್ಗೆ ಹೆಚ್ಚು ಒಲವು ಹೊಂದಿ ಹೋಗಿರುವ ಸಾಧ್ಯತೆಯಿದೆ. ಶೋಧ ಕಾರ್ಯ ಮುಂದುವರಿದಿದೆ ಎಂದು ಸುಬ್ರಹ್ಮಣ್ಯನಗರ ಪೊಲೀಸರು ಮಾಹಿತಿ ನೀಡಿದ್ದಾರೆ.