ಬೆಂಗಳೂರು, ಡಿ.31 (DaijiworldNews/PY): "ಕುಂದಾಪುರದ ಕೋಟ ತಟ್ಟುವಿನಲ್ಲಿ ಪೊಲೀಸರಿಂದ ದೌರ್ಜನ್ಯಕ್ಕೆ ಈಡಾಗಿರುವ ಕೊರಗ ಸಮುದಾಯದ ಮೇಲೆ ಪೊಲೀಸರೇ ಪ್ರಕರಣ ದಾಖಲು ಮಾಡಿರುವುದು ನೋಡಿದರೆ ದೌರ್ಜನ್ಯ ಆಕಸ್ಮಿಕ ಅಲ್ಲ, ಯೋಜಿತ ಸಂಚಿನಂತೆ ಕಾಣುತ್ತಿದೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕೊರಗ ಸಮುದಾಯದ ಮೇಲೆ ಕೋಟ ಪೊಲೀಸರು ಪ್ರಕರಣ ದಾಖಲಿಸಿರುವುದು, ಅಮಾನವೀಯವಾದುದು ಮಾತ್ರವಲ್ಲ ಅತ್ಯಂತ ನಾಚಿಕೆಗೇಡಿನ ಸಂಗತಿ. ಈ ಪ್ರಕರಣವನ್ನು ತಕ್ಷಣ ವಾಪಸು ಪಡೆಯಲು ಸಿಎಂ ಸೂಚನೆ ನೀಡಿ, ಕಾರಣಕರ್ತ ಪೊಲೀಸರ ವಿರುದ್ದ ಕ್ರಮಕೈಗೊಳ್ಳಬೇಕು" ಎಂದು ಒತ್ತಾಯಿಸಿದ್ದಾರೆ.
"ಹಿಂದುಗಳೆಲ್ಲ ಒಂದು ಎಂದು ಉದ್ಘೋಷಿಸುತ್ತಿರುವ ಬಿಜೆಪಿ ಬ್ರಾಂಡಿನ ಹಿಂದೂ ಧರ್ಮದಲ್ಲಿ ಕೊರಗ ಸಮುದಾಯ ಸೇರಿಲ್ಲವೇ? ದಲಿತರನ್ನು ಅಸ್ಪರ್ಶರನ್ನಾಗಿಯೇ ಉಳಿಸುವುದು ಇವರ ಗುಪ್ತ ಅಜೆಂಡಾವೇ?" ಎಂದು ಪ್ರಶ್ನಿಸಿದ್ದಾರೆ.
"ಹಿಂದುಗಳ ರಕ್ಷಣೆಗಾಗಿಯೇ ಅವತಾರವೆತ್ತಿ ಬಂದವರಂತೆ ಬೊಬ್ಬಿಡುತ್ತಿರುವ, ಸ್ಥಳೀಯ ಲೋಕಸಭಾ ಸದಸ್ಯರೂ ಆಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಮೌನವನ್ನು ಕೊರಗರ ಮೇಲಿನ ಪೊಲೀಸ್ ದೌರ್ಜನ್ಯಕ್ಕೆ ಮೌನಸಮ್ಮತಿ ಎಂದು ಅರ್ಥೈಸೋಣವೇ?" ಎಂದು ಕೇಳಿದ್ದಾರೆ.
"ದೌರ್ಜನ್ಯಕ್ಕೀಡಾದ ಕೊರಗರ ಪರ ಕಂಬನಿ ಮಿಡಿದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಗಮನಕ್ಕೆ ಬರದೆ ಪೊಲೀಸರು ಕೊರಗ ಬಂಧುಗಳ ವಿರುದ್ದ ಪ್ರಕರಣ ದಾಖಲಿಸಿದ್ದಾರೆಯೇ? ಹಾಗೆ ನಡೆದಿದ್ದರೆ ಅವರೊಬ್ಬ ಅಸಮರ್ಥ ಸಚಿವ, ಗಮನಕ್ಕೆ ಬಂದು ನಡೆದಿದ್ದರೆ ಅದು ಆತ್ಮವಂಚಕ ನಡವಳಿಕೆ" ಎಂದಿದ್ದಾರೆ.
"ಎಸ್ಸಿಪಿ/ಟಿಎಸ್ಪಿ ಕಾಯ್ದೆ ಸೇರಿದಂತೆ ಪರಿಶಿಷ್ಟಜಾತಿ/ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಜಾರಿಗೆ ತಂದಿದ್ದ ಯೋಜನೆಗಳಿಗೆ ಹಣ ಮಂಜೂರು ಮಾಡದೆ ಆರ್ಥಿಕವಾಗಿ ದಲಿತರನ್ನು ಸಾಯಿಸುತ್ತಿರುವ ಬಿಜೆಪಿ ಸರ್ಕಾರ, ಈಗ ಪೊಲೀಸರಿಂದಲೂ ದೌರ್ಜನ್ಯ ನಡೆಸಲು ಹೊರಟಂತಿದೆ" ಎಂದು ಹೇಳಿದ್ದಾರೆ.