ಬೆಂಗಳೂರು, ಡಿ.31 (DaijiworldNews/PY): "ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಸದೃಢಗೊಳಿಸಲು ಸರ್ಕಾರ ಬದ್ದ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸುಗಮ, ಸುರಕ್ಷಿತ ಸಂಚಾರಕ್ಕಾಗಿ ಬೆಂಗಳೂರು ಸಂಚಾರ ಪೊಲೀಸ್ ಜಾರಿಗೆ ತಂದಿರುವ ತಂತ್ರಜ್ಞಾನ ಆಧಾರಿತ ಸೌಲಭ್ಯಗಳು ಹಾಗೂ ಸಂಚಾರ ಬೀಟ್ ವ್ಯವಸ್ಥೆ, ಸಂಚಾರ ಪೊಲೀಸರ ಕಾರ್ಯನಿರ್ವಹಣಾ ಮಾರ್ಗಸೂಚಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, "ಯಾವ ರಸ್ತೆಯಲ್ಲಿ ಹೆಚ್ಚಿನ ವಾಹನ ದಟ್ಟಣೆ ಇರುತ್ತದೆಯೋ ಆ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಮೊದಲು ಅವಕಾಶ ನೀಡಲು ತಂತ್ರಜ್ಞಾನ ಆಧಾರಿತ ಸೌಲಭ್ಯಗಳನ್ನು ನೀಡಲಾಗುತ್ತದೆ" ಎಂದಿದ್ದಾರೆ.
"ವಾಹನದಟ್ಟಣೆ ಇರುವ ರಸ್ತೆಗಳಲ್ಲಿ ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಇದರೊಂದಿಗೆ ಅಪರಾಧ ಕೃತ್ಯಗಳು ನಡೆಯದಂತೆ ನಿಗಾ ವಹಿಸುವುದರೊಂದಿಗೆ ಅಪರಾಧಗಳು ನಡೆದರೆ ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಲು ಸಾಧ್ಯವಾಗುವಂತೆ ಕೃತಕ ಬುದ್ಧಿಮತ್ತೆಯ ಸಾಧನಗಳನ್ನು ಅಳವಡಿಸಲಾಗುತ್ತದೆ" ಎಂದು ಹೇಳಿದ್ದಾರೆ.
ಪೊಲೀಸರ ಕಾರ್ಯವೈಖರಿಯನ್ನು ಶ್ಲಾಘಿಸಿದ ಸಿಎಂ, "ಪೊಲೀಸರ ಶೇ.99ರಷ್ಟು ಉತ್ತಮ ಕಾರ್ಯವನ್ನು ನಾವು ಗುರುತಿಸಬೇಕು. ಈ ಸಮುದಾಯಕ್ಕೆ ಸರ್ಕಾರ ಹಾಗೂ ಸಮಾಜ ಸಂಪೂರ್ಣವಾದ ಗೌರವ ಕೊಡಬೇಕು" ಎಂದಿದ್ದಾರೆ.
"ಈಗ ಪೊಲೀಸ್ ವಸತಿ ಯೋಜನೆ-2020 ಅನ್ನು ಪ್ರಾರಂಭಿಸಿದ್ದೇವೆ. ಪೊಲೀಸರಿಗೆ 10,475 ಮನೆ ಕಟ್ಟಲು ಉದ್ದೇಶಿಸಿದ್ದು, ಮೊದಲ ಹಂತ ಪೂರ್ಣಗೊಂಡಿದೆ. ಎರಡನೇ ಹಂತಕ್ಕೆ ಕೂಡಲೇ ಅನುಮೋದನೇ ನೀಡಲಿದ್ದೇವೆ" ಎಂದು ತಿಳಿಸಿದ್ದಾರೆ.