ಬೆಂಗಳೂರು, ಡಿ 30 (DaijiworldNews/MS):'ಕಾವೇರಿ ವಿಚಾರದಲ್ಲಿ ಕಾಂಗ್ರೆಸ್ನ ಬದ್ಧತೆಯ ಪಾದಯಾತ್ರೆಯಿಂದ ಹತಾಶರಾದ ಜೆಡಿಎಸ್ ಹಾಗೂ ಬಿಜೆಪಿಯವರ ಮೈಯ್ಯಲ್ಲಿ ಇರುವೆ ಹರಿದಾಡುತ್ತಿವೆ!' ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಮೇಕೆದಾಟು ಯೋಜನೆಯ ವಿಚಾರದಲ್ಲಿ ಕಾಂಗ್ರೆಸ್ - ಬಿಜೆಪಿ ಟ್ವೀಟ್ ವಾರ್ ಮುಂದುವರಿಸಿದ್ದು, "'ಡಬಲ್ ಇಂಜಿನ್ ಸರ್ಕಾರ' ನಮ್ಮದು ಎಂದುಕೊಳ್ಳುವ ಬಿಜೆಪಿಗೆ ಕೇಂದ್ರದ ಅನುಮತಿ ಪಡೆಯುವ ಶಕ್ತಿ ಇಲ್ಲವೇ?" ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಬಗ್ಗೆ ರಾಜ್ಯ ಕಾಂಗ್ರೆಸ್ ಘಟಕ ಸರಣಿ ಟ್ವೀಟ್ ಮಾಡಿದ್ದು" 25 ಸಂಸದರು ಬಿಜೆಪಿಯವರು, ಕೇಂದ್ರದಲ್ಲೂ ಬಿಜೆಪಿ, ರಾಜ್ಯದಲ್ಲೂ ಬಿಜೆಪಿ, ಹೀಗಿದ್ದೂ ಮೇಕೆದಾಟು ಯೋಜನೆ ಜಾರಿ ವಿಚಾರದಲ್ಲಿ ಪ್ರಗತಿ ಇಲ್ಲದಿರುವುದು ಬಿಜೆಪಿಯ ಬದ್ಧತೆಯ ಕೊರತೆಯಿಂದ ಅಲ್ಲವೇ?ಬಿಜೆಪಿ ಸರ್ಕಾರ ಬಂದ ಮೇಲೆ ಪ್ರಗತಿ ಏನು,ಕೇಂದ್ರ ಪರಿಸರ ಇಲಾಖೆಯ ಅನುಮತಿ ಪಡೆಯಲಾಗಲಿಲ್ಲವೇಕೆ? ಇದಕ್ಕೆ ಉತ್ತರಿಸುವ ಶಕ್ತಿ ಇದೆಯೇ ಬಿಜೆಪಿ ಸರ್ಕಾರಕ್ಕೆ ? ಎಂದು ಕೇಳಿದೆ.
"2019ರಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಡಿ.ಕೆ ಶಿವಕುಮಾರ್ ಅವರ ಇಚ್ಛಾಶಕ್ತಿ, ಬದ್ಧತೆಯಿಂದ ಕೇಂದ್ರ ಪರಿಸರ ಇಲಾಖೆಯ ಅನುಮತಿಗಾಗಿ TOR ಸಲ್ಲಿಸಲಾಗಿತ್ತು.ನಂತರದ ಪ್ರಗತಿಯ ಬಗ್ಗೆ ಬಿಜೆಪಿ ಉತ್ತರಿಸುವ ಧೈರ್ಯ ತೋರುವುದೇ?ಈಗ 'ಡಬಲ್ ಇಂಜಿನ್ ಸರ್ಕಾರ' ನಮ್ಮದು ಎಂದುಕೊಳ್ಳುವ ಬಿಜೆಪಿಗೆ ಕೇಂದ್ರದ ಅನುಮತಿ ಪಡೆಯುವ ಶಕ್ತಿ ಇಲ್ಲವೇ?" ಎಂದು ವ್ಯಂಗ್ಯವಾಡಿದೆ.
"ಕಾವೇರಿ ವಿಚಾರದಲ್ಲಿ ಕಾಂಗ್ರೆಸ್ನ ಬದ್ಧತೆಯ ಪಾದಯಾತ್ರೆಯಿಂದ ಹತಾಶರಾದ ಜೆಡಿಎಸ್ ಹಾಗೂ ಬಿಜೆಪಿಯವರ ಮೈಯ್ಯಲ್ಲಿ ಇರುವೆ ಹರಿದಾಡುತ್ತಿವೆ!ಕಾವೇರಿ ನ್ಯಾಯಾಧಿಕರಣ ರಾಜ್ಯಕ್ಕೆ 270 ಟಿಎಂಸಿ ನೀರನ್ನು ಹಂಚಿಕೆ ಮಾಡಿದಾಗ ಸುಪ್ರೀಂನಲ್ಲಿ ಪ್ರಶ್ನಿಸಿ ಹೆಚ್ಚುವರಿ 14.75 ಟಿಎಂಸಿ ನೀರು ಪಡೆಯಲು ಶ್ರಮಿಸಿದ್ದು ಕಾಂಗ್ರೆಸ್ ಸರ್ಕಾರ" ಎಂದು ಹೇಳಿದೆ.