ಬೆಂಗಳೂರು, ಡಿ.30 (DaijiworldNews/PY): "ನಮಗೆ ಕಾಂಗ್ರೆಸ್ನ ಮೇಕೆದಾಟು ಪಾದಯಾತ್ರೆಯಿಂದ ಯಾವುದೇ ರೀತಿಯಾದ ಭಯವಿಲ್ಲ" ಎಂದು ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ನ ಮೇಕೆದಾಟು ಪಾದಯಾತ್ರಯಿಂದ ನಮಗೆ ಭಯವಿಲ್ಲ. ಆದರೆ, ಜೆಡಿಎಸ್, ಕಾಂಗ್ರೆಸ್ ಗದ್ದಲದಿಂದ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ ಎನ್ನುವ ಭಯ" ಎಂದಿದ್ದಾರೆ.
"ಕಾಂಗ್ರೆಸ್ನ ಪಾದಯಾತ್ರೆ ಒಂದು ದೊಂಬರಾಟವಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ, ಡಿ ಕೆ ಶಿವಕುಮಾರ್ ನೀರಾವರಿ ಸಚಿವ ಆಗಿದ್ದರು. ಆಗ ಅವರು ಕಡಲೆಕಾಯಿ ತಿನ್ನುತ್ತಿದ್ದರು. ಇದೀಗ ಮೇಕೆ ಮಾಂಸ ತಿನ್ನುವ ಸಲುವಾಗಿ ಚುನಾವಣೆಯ ಯಾತ್ರೆ ಮಾಡುತ್ತಿದ್ದಾರೆ" ಎಂದು ಹೇಳಿದ್ದಾರೆ.
"ಮನಮೋಹನ್ ಸಿಂಗ್ ಸರ್ಕಾರ ಇದ್ದ ಸಂದರ್ಭ ಏಕೆ ಮೇಕೆದಾಟು ಯೋಜನೆ ಮಾಡಲಿಲ್ಲ. 6 ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಏಕೆ ಯೋಜನೆ ಕುರಿತು ಯೋಚನೆ ಮಾಡಲಿಲ್ಲ. ಅಧಿಕಾರವಿದ್ದಾಗ ಏನೂ ಮಾಡದೇ ಈಗ ಮೇಕೆದಾಟು ನನ್ನದು ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ" ಎಂದಿದ್ದಾರೆ.
"ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಕೇಂದ್ರದ ಜಲ ಸಂಪನ್ಮೂಲ ಸಚಿವರೊಂದಿಗೆ ಮಾತುಕತೆ ನಡೆಸಿದ್ದಾರೆ. ಮೇಕೆದಾಟು ಯೋಜನೆ ಮಾಡಲು ನಾವು ಯತ್ನಿಸುತ್ತಿದ್ದೇವೆ" ಎಂದು ತಿಳಿಸಿದ್ದಾರೆ.