ಬೆಂಗಳೂರು, ಡಿ.30 (DaijiworldNews/PY): "ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 1,187 ಸ್ಥಾನಗಳ ಪೈಕಿ 500ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ ಎಂಬುದನ್ನು ಈ ಫಲಿತಾಂಶ ಇನ್ನೊಮ್ಮೆ ಸಾಬೀತು ಮಾಡಿದೆ" ಎಂದಿದ್ದಾರೆ.
"ಚುನಾವಣೆಯಲ್ಲಿ ಹಣ ಖರ್ಚು ಮಾಡಿದರೆ ಗೆಲ್ಲಬಹುದು ಎಂಬ ಬಿಜೆಪಿ ಅವರ ಸೊಕ್ಕನ್ನು ರಾಜ್ಯದ ಜನ ಮುರಿದಿದ್ದಾರೆ. ಈ ಫಲಿತಾಂಶ ರಾಜ್ಯ ಸರ್ಕಾರದ ಜನವಿರೋಧಿ ಧೋರಣೆ, ಭ್ರಷ್ಟಾಚಾರ ಮತ್ತು ದುರಾಡಳಿತಕ್ಕೆ ಜನತೆ ನೀಡಿರುವ ಸಂದೇಶ" ಎಂದು ತಿಳಿಸಿದ್ದಾರೆ.
"ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿ, ಮತ ನೀಡಿದ ಎಲ್ಲಾ ಮತದಾರರಿಗೆ ಮತ್ತು ಅಭ್ಯರ್ಥಿಗಳ ಪರವಾಗಿ ದುಡಿದ ಎಲ್ಲಾ ನಾಯಕರು, ಕಾರ್ಯಕರ್ತರಿಗೆ ಧನ್ಯವಾದಗಳು ಹಾಗೂ ಜಯಗಳಿಸಿರುವ ನಮ್ಮ ಪಕ್ಷದ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದನೆಗಳು" ಎಂದು ಹೇಳಿದ್ದಾರೆ.