ಬೆಂಗಳೂರು, ಡಿ.30 (DaijiworldNews/PY): ದೇಗುಲ ಸ್ವತಂತ್ರ ವಿಧೇಯಕಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಜನವರಿ 4ರಂದು ಚರ್ಚಿಸುವುದಕ್ಕೆ ಹಿರಿಯ ನಾಯಕರ ಸಭೆ ಆಯೋಜಿಸಿದೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, "ದೇಗುಲಗಳನ್ನು ಬೇರೆ ರಾಜ್ಯಗಳ ರೀತಿಯಲ್ಲಿ ಖಾಸಗಿ ಒಡೆತನಕ್ಕೆ ನೀಡಲು ನಾವು ಬಿಡುವುದಿಲ್ಲ. ದೇಗುಲಗಳು ಸರ್ಕಾರದ ಆಸ್ತಿ ಹಾಗೂ ಖಜಾನೆ. ಯಾವುದೇ ಕಾರಣಕ್ಕೂ ಈ ಕಾಯ್ದೆಯನ್ನು ಜಾರಿಗೆ ತರಲು ಅವಕಾಶ ನೀಡುವುದಿಲ್ಲ" ಎಂದಿದ್ದಾರೆ.
ಮೇಕೆದಾಟು ವಿಚಾದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಮೇಕೆದಾಟು ಪಾದಯಾತ್ರೆಯನ್ನು ತಡೆಯುವುದಕ್ಕೆ ನನ್ನ ವಿರುದ್ದ ದೊಡ್ಡ ಮಟ್ಟದ ಷಡ್ಯಂತ್ರ ನಡೆಯುತ್ತಿದೆ. ಯಾರ್ಯಾರು ಎಲ್ಲಿ ಸಭೆ ನಡೆಸುತ್ತಾರೆ ಎನ್ನುವುದು ತಿಳಿದಿದೆ. ಯಾವ ರೀತಿಯಾಗಿ ಐಟಿ, ಇಡಿ ಸೇರಿದಂತೆ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಬಹುದು ಎಂದು ತಿಳಿದಿದೆ" ಎಂದು ಲೇವಡಿ ಮಾಡಿದ್ದಾರೆ.
"ದಳಪತಿಗಳೊಂದಿಗೆ ನಮ್ಮ ಜೊತೆ ಯಾವುದೇ ರೀತಿಯಾದ ವಿವಾದವಿಲ್ಲ. ಅವರ ಪಾದಯಾತ್ರೆ ಹಾಗೂ ನಮ್ಮ ಪಾದಯಾತ್ರೆಯಲ್ಲಿರುವ ವ್ಯತ್ಯಾಸದ ಕುರಿತು ನನಗೆ ತಿಳಿದಿಲ್ಲ. ನಾನು ಈಗಲೂ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಿ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡುತ್ತೇನೆ" ಎಂದಿದ್ದಾರೆ.