ಬೆಂಗಳೂರು, ಡಿ.30 (DaijiworldNews/PY): "ಸರ್ಕಾರದ ಹಿಡಿತದಿಂದ ದೇವಸ್ಥಾನಗಳನ್ನು ಮುಕ್ತ ಮಾಡುತ್ತಿರುವುದಕ್ಕೆ ಸ್ವಾಗತವಿದೆ. ತಮಿಳುನಾಡಿನಲ್ಲೂ ಸಹ ಈ ಒತ್ತಾಯವಿದೆ. ತಮಿಳುನಾಡು ಸರ್ಕಾರದ ನಡೆ ಏನಿದೆ ಎಂದು ನಾವು ಕಾದು ನೋಡುತ್ತಿದ್ದೇವೆ" ಎಂದು ಬಿಜೆಪಿ ನಾಯಕಿ ಖುಷ್ಬೂ ತಿಳಿಸಿದ್ಧಾರೆ.
ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಇಂದು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕರ್ನಾಟಕದಲ್ಲಿ ದೇವಸ್ಥಾನಗಳನ್ನು ನಿಯಂತ್ರಣ ಕಾಯ್ದೆಗಳಿಂದ ಮುಕ್ತಗೊಳಿಸುವ ಚಿಂತನೆ ಇದೆ. ಚುನಾವಣೆಯ ಸಂದರ್ಭ ತಮಿಳುನಾಡಿನಲ್ಲೂ ಸಹ ದೇವಸ್ಥಾನಗಳನ್ನು ಮುಕ್ತಗೊಳಿಸುವ ಭರವಸೆ ನೀಡಲಾಗಿತ್ತು" ಎಂದು ಹೇಳಿದ್ದಾರೆ.
"ನಾನು ಪ್ರಧಾನಿ ನೇತೃತ್ವದ ಪೋಷಣ್ ಅಭಿಯಾನದಲ್ಲಿ ಭಾಗವಹಿಸಿದ್ದೇನೆ. ಸ್ವಸ್ಥ ಬಾಲಕ್, ಸ್ವಸ್ಥ ಬಾಲಿಕಾ ಸ್ಪರ್ಧೆ ಇದೆ. ಅಪೌಷ್ಟಿಕತೆಯುಳ್ಳ 0-6 ವರ್ಷದ ಮಕ್ಕಳನ್ನು ದೇಶದಾದ್ಯಂತ ಪತ್ತೆ ಮಾಡಲಾಗುತ್ತಿದ್ದು, ಆಶಾವಾಡಿ, ಅಂಗನವಾಡಿಗಳಲ್ಲಿ ಈ ಮಕ್ಕಳ ನೋಂದಣಿ ಮಾಡುವ ಕೆಲಸ ಆಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಈ ಅಭಿಯಾನವನ್ನು ಕೈಗೊಳ್ಳುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಇಂದು ಚರ್ಚಿಸಿದ್ದೇನೆ" ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಖುಷ್ಬೂ, "ನಿಮ್ಮ ಅಮೂಲ್ಯವಾದ ಸಮಯಕ್ಕಾಗಿ ಧನ್ಯವಾದಗಳು. ಪ್ರತಿ ಬಾರಿ ನಾನು ಸಮಯ ನಿರ್ವಹಣೆ, ಉತ್ತಮ ಆಡಳಿತದ ವಿಚಾರಗಳು, ಆತಿಥ್ಯ ಮತ್ತು ನಮ್ರತೆಯ ಬಗ್ಗೆ ತುಂಬಾ ಕಲಿಯುತ್ತೇನೆ" ಎಂದು ತಿಳಿಸಿದ್ಧಾರೆ.