ಪುಣೆ, ಡಿ.30 (DaijiworldNews/PY): "ಅಂದಿನ ಸಿಎಂ ನರೇಂದ್ರ ಮೋದಿ ಅವರ ವಿರುದ್ದ ಸೇಡಿನ ರಾಜಕಾರಣ ಮಾಡಬಾರದು ಎಂದು ನಾನು ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ತೀರ್ಮಾನಿಸಿದ್ದೆವು" ಎಂದು ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ತಿಳಿಸಿದ್ದಾರೆ.
ಮರಾಠಿ ದೈನಿಕ ಲೋಕಸತ್ತಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಮನಮೋಹನ್ ಸಿಂಗ್ ಆಡಳಿತದ ವಿರುದ್ದ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದ ಮೋದಿ ಅವರೊಂದಿಗೆ ಮಾತುಕತೆ ನಡೆಸಲು ಹಿಂದಿನ ಯುಪಿಎ ಸರ್ಕಾರದಲ್ಲಿ ನನ್ನನ್ನು ಬಿಟ್ಟು ಬೇರೆ ಯಾವುದೇ ಸಚಿವರು ಇರಲಿಲ್ಲ" ಎಂದು ಹೇಳಿದ್ದಾರೆ.
"ಮೋದಿ ಅವರು ಗುಜರಾತ್ ಸಿಎಂ ಆಗಿದ್ದ ಸಂದರ್ಭ ನಾನು ಕೇಂದ್ರದಲ್ಲಿದ್ದೆ. ಪ್ರಧಾನಿ ಎಲ್ಲಾ ಸಿಎಂಗಳ ಸಭೆ ಕರೆದಾಗ, ಮೋದಿಜಿ ಬಿಜೆಪಿ ಆಡಳಿತವಿರುವ ರಾಜ್ಯಗಳ ಸಿಎಂಗಳ ಗುಂಪನ್ನು ಮುನ್ನಡೆಸುತ್ತಿದ್ದರು ಹಾಗೂ ಕೇಂದ್ರದ ಮೇಲೆ ದಾಳಿ ನಡೆಸುತ್ತಿದ್ದರು. ಹಾಗಾಗಿ, ಅಂತಹ ಪರಿಸ್ಥಿತಿಯಲ್ಲಿ ಮೋದಿಗೆ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವ ಕುರಿತು ತಂತ್ರ ರೂಪಿಸಿದ್ದೆವು. ಯುಪಿಎ ಸರ್ಕಾರದಲ್ಲಿ ನನ್ನನ್ನು ಹೊರತುಪಡಿಸಿ ಮೋದಿ ಅವರೊಂದಿಗೆ ಮಾತುಕತೆ ನಡೆಸಲು ಬೇರೆ ಯಾವ ಸಿಎಂ ಸಹ ಇರಲಿಲ್ಲ" ಎಂದಿದ್ಧಾರೆ.
"ಮೋದಿ ಹಾಗೂ ಅವರ ಪಕ್ಷದ ನಡುವೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ, ಸಿಎಂ ಎನ್ನುವುದನ್ನು ಯಾರೂ ಸಹ ಮರೆಯಬಾರದು. ಅವರು ಒಂದು ರಾಜ್ಯದ ಸಿಎಂ ಹಾಗೂ ಜನರು ಜನಾದೇಶ ನೀಡಿದ್ಧಾರೆ ಎಂದು ನಾನು ಯುಪಿಎ ಆಂತರಿಕ ಸಭೆಗಳಲ್ಲಿ ಹೇಳುತ್ತಿದ್ದೆ. ಅವರು, ಸಮಸ್ಯೆಗಳೊಂದಿಗೆ ಬಂದಾಗ, ಅವುಗಳು ಬಗೆಹರಿಯುವಂತೆ ನೋಡಿಕೊಳ್ಳುವುದು ಹಾಗೂ ಅವರ ರಾಜ್ಯದ ಜನರ ಹಿತಾಸಕ್ತಿಗಳಿಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನಮ್ಮ ರಾಷ್ಟ್ರೀಯ ಕರ್ತವ್ಯವಾಗಿತ್ತು" ಎಂದು ಹೇಳಿದ್ಧಾರೆ.