ಬೆಂಗಳೂರು, ಡಿ.29 (DaijiworldNews/PY): ಬ್ರಹ್ಮಾವರ ತಾಲೂಕಿನ ಕೋಟೆತಟ್ಟು ಬಾರಿಕೆರೆ ಕೊರಗ ಸಮುದಾಯದ ವ್ಯಕ್ತಿಯೊಬ್ಬರ ಮನೆಯಲ್ಲಿ ಮೆಹೆಂದಿ ಕಾರ್ಯಕ್ರಮ ನಡೆಯುತ್ತಿದ್ದಾಗ ಕೋಟ ಪೊಲೀಸರು ಭೇಟಿ ನೀಡಿ ಲಾಠಿ ಪ್ರಹಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಖಂಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಮೈಕ್ ಬಳಸಿದ ಒಂದೇ ಕಾರಣಕ್ಕೆ ಪೊಲೀಸರು ಕೊರಗ ಕುಟುಂಬವೊಂದರ ಮದುವೆ ಕಾರ್ಯಕ್ರಮಕ್ಕೆ ನುಗ್ಗಿ ವೃದ್ಧರು, ಮಕ್ಕಳು, ಮಹಿಳೆಯರು, ಮದುಮಗ ಎಂಬುದನ್ನ ನೋಡದೆ ಮನಸೋ ಇಚ್ಚೆ ಥಳಿಸಿದ್ದು ಅಕ್ಷಮ್ಯ ಕೃತ್ಯ. ಸಮಾಜ ಕಲ್ಯಾಣ ಸಚಿವರ ತವರೂರಲ್ಲೇ ಈ ಘಟನೆ ನಡೆದಿರುವುದು ಈ ದಲಿತ ವಿರೋಧಿ ಬಿಜೆಪಿ ಸರ್ಕಾರದ ದಬ್ಬಾಳಿಕೆ ಧೋರಣೆಗೆ ಹಿಡಿದ ಕೈಗನ್ನಡಿ" ಎಂದಿದ್ದಾರೆ.
"ಇಷ್ಟೆಲ್ಲಾ ನಡೆದಿದ್ದರೂ ಕೋಟಾ ಶ್ರೀನಿವಾಸ್ ಪೂಜಾರಿ ಸೇರುದಂತೆ ಸರ್ಕಾರದ ಯಾವೊಬ್ಬರೂ ಈವರೆಗೂ ಸ್ಥಳಕ್ಕೆ ಭೇಟಿ ನೀಡಿಲ್ಲ, ಪೊಲೀಸ್ ದೌರ್ಜನ್ಯದ ಸಂತ್ರಸ್ತರ ನೋವು ಆಲಿಸಿಲ್ಲ. ಈ ಸರ್ಕಾರ ಬಂದಾಗಿನಿಂದ ದಲಿತ ಸಮುದಾಯದ ಜನರ ಮೇಲಿನ ದೌರ್ಜನ್ಯದ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿಯೇ ಸಾಗುತ್ತಿದೆ" ಎಂದು ತಿಳಿಸಿದ್ದಾರೆ.
"ಶೋಷಿತರು ಒಳ್ಳೆ ಬಟ್ಟೆ ಹಾಕಿದರೆ ಸಹಿಸರು, ಶೋಷಿತರು ದುಡಿದು ತಿಂದರೂ ಸಹಿಸರು, ಶೋಷಿತರು ದೇವಾಲಯಕ್ಕೆ ಬಂದರೂ ಸಹಿಸರು, ಶೋಷಿತರ ಏಳಿಗೆಯನ್ನು ಸಹಿಸರು, ಶೋಷಿತರು ಸಂಭ್ರಮಿಸಿದರೂ ಸಹಿಸರು. ಅಶಕ್ತ ಕೊರಗ ಸಮುದಾಯದ ಜನರ ಮೇಲೆ ದೌರ್ಜನ್ಯ ನಡೆದಿದ್ದರೂ, ಅಲ್ಲಿ 'ಭಯಂಕರ' ಹಿಂದೂ ರಕ್ಷಕರಿದ್ದರೂ ಇವರ ನೆರವಿಗೆ ಈವರೆಗೂ ನಿಂತಿಲ್ಲವೇಕೆ?" ಎಂದು ಪ್ರಶ್ನಿಸಿದ್ದಾರೆ.