ನವದೆಹಲಿ, ಡಿ.29 (DaijiworldNews/PY): "ಸ್ವದೇಶಿ ಲಸಿಕೆ ತಯಾರಿಕಾ ಕಂಪೆನಿ ಬಯಾಲಾಜಿಕಲ್ ಇ ಲಿಮಿಟೆಡ್ ಸಂಸ್ಥೆಯ ಕೋರ್ಬೆವ್ಯಾಕ್ಸ್ ಕೊರೊನಾ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ಬಳಸುವ ಪ್ರಯೋಗಕ್ಕೆ ಭಾರತೀಯ ಔಷಧ ನಿಯಂತ್ರಕರು ಅನುಮೋದನೆ ನೀಡಿದ್ಧಾರೆ" ಎಂದು ಸುದ್ದಿಸಂಸ್ಥೆಯೊಂದು ಟ್ವೀಟ್ ಮಾಡಿದೆ.
ಕೊರೊನಾ ಬೂಸ್ಟರ್ ಡೋಸ್ ಆಗಿ ಬಳಸಲು ಮೂರನೇ ಹಂತದ ಪ್ರಯೋಗಕ್ಕೆ ವಿಷಯ ತಜ್ಞರ ಸಮಿತಿಯು ಎರಡು ಷರತ್ತುಗಳ ಆಧಾರದ ಮೇಲೆ ಅನುಮತಿ ನೀಡಿದ್ದು, ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಲಸಿಕೆಯ ಬೂಸ್ಟರ್ ಡೋಸ್ ಪ್ರಯೋಗಕ್ಕೂ ಸಹ ಅನುಮತಿ ಕೋರಲಾಗಿದೆ.
ಜನವರಿ 10ರಿಂದ ಬೂಸ್ಟರ್ ಡೋಸ್ ಲಸಿಕೆ ನೀಡುವಂತೆ ಇತ್ತೀಚೆಗೆ ಪ್ರಧಾನಿ ಮೋದಿ ಅವರು ಘೋಷಿಸಿದ್ದರು. ಇದಾದ ನಂತರ, ಲಸಿಕೆ ತಯಾರಿಕಾ ಕಂಪೆನಿಗಳು ಬೂಸ್ಟರ್ ಡೋಸ್ ಪ್ರಯೋಗಕ್ಕೆ ಅನುಮತಿ ಕೋರುತ್ತಿವೆ.
ಕಂಪೆನಿಯು, ಬೂಸ್ಟರ್ ಡೋಸ್ ಪ್ರಯೋಗವನ್ನು ಆರು ಹಾಗೂ ಒಂಭತ್ತು ತಿಂಗಳ ಎರಡು ವಿಭಾಗಗಳಲ್ಲಿ ವಯಸ್ಸಿನ ಆಧಾರದ ಮೇಲೆ ಮಾಡಲು ಹೇಳಲಾಗಿದೆ.