ಮೈಸೂರು, ಡಿ.29 (DaijiworldNews/PY): "ಯುರೋಪಿಯನ್ ದೇಶಗಳಲ್ಲಿ ಕ್ರೈಸ್ತ ಧರ್ಮ ನೆಲ ಕಚ್ಚುತ್ತಿದೆ. ಆ ಕಾರಣಕ್ಕೆ ನಮ್ಮ ದೇಶದಲ್ಲಿ ನೆಲೆ ಕಂಡುಕೊಳ್ಳುವ ಯತ್ನವೇ ಮತಾಂತರ" ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯುರೋಪಿಯನ್ ದೇಶಗಳಲ್ಲಿ ಚರ್ಚ್ಗಳಿಗೆ ಯಾರೂ ಹೋಗುತ್ತಿಲ್ಲ. ಅಲ್ಲಿ ಚರ್ಚ್ಗಳು ಮಾರಾಟಕ್ಕಿವೆ" ಎಂದಿದ್ದಾರೆ.
"ಜನರನ್ನು ಮೋಸ ಮಾಡಿ ಮತಾಂತರ ಮಾಡುವುದಕ್ಕೆ ಬ್ರೇಕ್ ಹಾಕಲಾಗಿದೆ. ಚಿಕಿತ್ಸೆ ನೀಡಿ ರೋಗ ಮಾಡಿಸುತ್ತಾರೆ, ಬಳಿ ಏಸುವಿನ ಪ್ರಾರ್ಥನೆ ಮಾಡಿಸುತ್ತಾರೆ. ಏಸುವಿನಿಂದ ಗುಣವಾಗಿದೆ ಎಂದು ಮೋಸದಿಂದ ಮತಾಂತರ ಮಾಡುತ್ತಾರೆ. ನಿಮ್ಮ ಆಸ್ಪತ್ರೆಗಳನ್ನು ಬಂದ್ ಮಾಡಿ. ಬರೀ ಏಸುವಿನ ದೇವಾಲಯನ್ನು ಕಟ್ಟಿಸಿ ನೋಡೋಣ" ಎಂದು ಸವಾಲೆಸೆದಿದ್ದಾರೆ.
"ಕ್ರಿಶ್ಚಿಯಾನಿಟಿ ಏನು ಮಾರುಕಟ್ಟೆಯ ವಸ್ತುನಾ?. ನಿಮ್ಮ ಧರ್ಮವನ್ನು ಮಾರುಕಟ್ಟೆಯ ವಸ್ತುವನ್ನಾಗಿ ಮಾಡಬೇಡಿ. ಮೋಸದಿಂದ ಮತಾಂತರ ಮಾಡಬೇಡಿ" ಎಂದಿದ್ಧಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮತಾಂತರ ನಿಷೇಧ ಕಾಯ್ದೆ ವಾಪಸ್ ಎನ್ನುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, "ಕಾಂಗ್ರೆಸ್ ಈ ರೀತಿಯಾದ ಮನಸ್ಥಿತಿಯಿಂದಲೇ ಅಧಿಕಾರ ಕಳೆದುಕೊಂಡಿದೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾಲಿಬಾನ್ ಮಾದರಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಈ ಬಗ್ಗೆ ಜನರಿಗೆ ತಿಳಿದಿದೆ. ಹಾಗಾಗಿ ಕಾಂಗ್ರೆಸ್ ಮುಂದೆಯೂ ಅಧಿಕಾರಕ್ಕೆ ಬರುವುದಿಲ್ಲ. 2023ರಲ್ಲೂ ಸಹ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ" ಎಂದು ಹೇಳಿದ್ಧಾರೆ.