ಹುಬ್ಬಳ್ಳಿ, ಡಿ 29 (DaijiworldNews/MS): ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಕಾರ್ಯಕರ್ತರು ನಡೆಸಿರುವ ಪುಂಡಾಟಿಕೆ ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಡಿ.31ರಂದು ಕರೆ ಕರ್ನಾಟಕ ಬಂದ್ ಗೆ ಕರೆ ನೀಡಿದೆ. ಆದರೆ ಅಂದು ಒತ್ತಾಯಪೂರ್ವಕವಾಗಿ ಬಂದ್ ನಡೆಸಿದರೆ ಅಂಥವರ ವಿರುದ್ದ ಮುಲಾಜಿಲ್ಲದೆ ಕಠಿಣ ಕ್ರಮ್ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೋವಿಡ್ ಕಾರಣದಿಂದ ಜನರು, ಸಣ್ಣ ವ್ಯಾಪಾರಿಗಳು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕರ್ನಾಟಕ ಬಂದ್ ಮುಂದಾಗುವುದು ಸರಿಯಲ್ಲ. ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆಯನ್ನು ಜನರೇ ತಿರಸ್ಕರಿಸಿದ್ದಾರೆ. ಸರ್ಕಾರವೂ ಎಂಇಎಸ್ ಸಂಘಟನೆ ನಿಷೇಧಿಸುವ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಮಹಾರಾಷ್ಟ್ರ ಸರಕಾರದೊಂದಿಗೆ ಸರಕಾರ ಮಾತುಕತೆ ಮಾಡುತ್ತಿದೆ. ಸಂಕಷ್ಟದಲ್ಲಿರುವ ಕಾರಣ ಕನ್ನಡಪರ ಹೋರಾಟಗಾರರು ಬಂದ್ ಕೈಬಿಡಬೇಕು ಎಂದು ಮನವಿ ಮಾಡಿದರು.
ಸಂಕಷ್ಟದ ಸಮಯದಲ್ಲಿ ಕರ್ನಾಟಕ ಬಂದ್ ಸೂಕ್ತವಲ್ಲ. ಕೆಲ ಕನ್ನಡಪರ ಸಂಘಟನೆಗಳು ಬಂದ್ ಬೆಂಬಲ ನೀಡುವುದಿಲ್ಲ ಎಂದಿದ್ದಾರೆ. ಯಾವುದೇ ಕಾರಕ್ಕೂ ಬಲವಂತದಿಂದ ಬಂದ್ ಮಾಡುವುದು ಸರಿಯಲ್ಲ. ಈ ಬಗ್ಗೆ ಗಮನಕ್ಕೆ ಬಂದರೆ ಅಂತಹವರ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.