ಬೆಂಗಳೂರು, ಡಿ 29 (DaijiworldNews/MS): ಮೇಕೆದಾಟು ವಿಚಾರದಲ್ಲಿ ಸುಳ್ಳಿನ ಜಾತ್ರೆ ಮಾಡುವ ಬದಲು ಸತ್ಯ ಶೋಧನೆ ಮಾಡಿಕೊಳ್ಳಲಿ ಎಂದು ರಾಜ್ಯ ಬಿಜೆಪಿ ಘಟಕವು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯ ವಿಚಾರಗಳನ್ನು ಮುಂದಿಟ್ಟುಕೊಂಡು ಡಿ.ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ವಿರುದ್ದ ಸರಣಿ ಟ್ವಿಟ್ ಮಾಡುವ ಮೂಲಕ ವಾಗ್ದಾಳಿ ನಡೆಸಿದ ಬಿಜೆಪಿ "ಮೇಕೆದಾಟು ಯೋಜನೆ ವಿಳಂಬಕ್ಕೆ ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ ಶಿವಕುಮಾರ್ ಅವರೇ ನೇರ ಕಾರಣ" ಎಂದು ಆರೋಪಿಸಿದೆ.
ನೀರಾವರಿ ಮಂತ್ರಿಯಾಗಿದ್ದ ಎಂ.ಬಿ. ಪಾಟೀಲ್ ಅವರಿಗೆ ಯೋಜನೆಯ ಶ್ರೇಯಸ್ಸು ಸಿಗಬಹುದೆಂಬ ಕಾರಣಕ್ಕೆ ಡಿಪಿಆರ್ ಸಕಾಲದಲ್ಲಿ ಒಪ್ಪಿಗೆಯಾಗದಂತೆ ಡಿಕೆಶಿ ನೋಡಿಕೊಂಡರು. ಈಗ ಕಾವೇರಿ ನಮ್ಮ ಹಕ್ಕು ಎಂಬ ಸುಳ್ಳಿನಜಾತ್ರೆ ಆರಂಭಿಸಿದ್ದಾರೆ.
ರಾಜ್ಯದಲ್ಲಿ ಐದು ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಇದಾದ ಬಳಿಕ ಜೆಡಿಎಸ್ ಜೊತೆ ಸೇರಿ ಮೈತ್ರಿ ಸರ್ಕಾರ ರಚಿಸಿದರು.ಆಗ ಇದೇ ಭ್ರಷ್ಟಾಧ್ಯಕ್ಷ ಡಿಕೆ ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದರು. ಆಗೇಕೆ ಕಾಂಗ್ರೆಸ್ ನಾಯಕರಿಗೆ ಮೇಕೆದಾಟು ಕಾಳಜಿ ಇರಲಿಲ್ಲ?ಈಗ ಸುಳ್ಳಿನ ಜಾತ್ರೆ ಮಾಡುವ ಬದಲು ಸತ್ಯ ಶೋಧನೆ ಮಾಡಿಕೊಳ್ಳಿ.
ಸುಳ್ಳು ಕಾಂಗ್ರೆಸ್ ಮನೆ ದೇವರು ಎಂಬುದಕ್ಕೆ ಇಲ್ಲೊಂದು ಸಾಕ್ಷಿಯಿದೆ. ಮೇಕೆದಾಟು ಪಾದಯಾತ್ರೆಗೆ ಹೊರಟಿರುವ ಕಾಂಗ್ರೆಸ್ ನೀರಿನ ವಿಚಾರದಲ್ಲಿ ಸುಳ್ಳು ಹೇಳುತ್ತಿದೆ. ಬೆಂಗಳೂರು ನಗರದ ಶೇ.60 ರಷ್ಟು ನೀರಿನ ಪೂರೈಕೆ ಈಗಲೂ ಅಂತರ್ಜಲವನ್ನು ಆಧರಿಸಿದೆಯಂತೆ. ಈಗ ಕಾವೇರಿಯನ್ನು ಹರಿಸುವುದಕ್ಕೆ ಹೊರಟಿದ್ದಾರೆ. ಎಂಥಹ ಸುಳ್ಳು!
ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಸಿದ್ದರಾಮಯ್ಯ ಉತ್ತರ ಕರ್ನಾಟಕದ ಜನತೆಗೆ ಮಂಕುಬೂದಿ ಎರಚಿದರು.ಈಗ ಮೇಕೆದಾಟು ಪಾದಯಾತ್ರೆ ನೆಪದಲ್ಲಿ ಡಿಕೆಶಿ ಹಳೆ ಮೈಸೂರು ಭಾಗದ ಜನರ ಕಣ್ಣಿಗೆ ಹರಳೆಣ್ಣೆ ಹಾಕಲು ಹೊರಟಿದ್ದಾರೆ. ಜೋಡಿ ಅಂದರೆ ಹೀಗಿರಬೇಕು !!!ಸುಳ್ಳಿನಜಾತ್ರೆ ಯನ್ನೇ ಆರಂಭಿಸಿದ್ದಾರೆ. ಎಂದು ಬಿಜೆಪಿ ಟೀಕಿಸಿದೆ.